

ಸೊರಬ: ಭೂ ಮಂಜೂರಾತಿಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸದೆ ಅಧಿಕಾರಗಳ ಮೇಲೆ ಒತ್ತಡ ಹಾಕಿ, ಸೈನಿಕ ಕೋಟಾದಡಿ ಶಾಸಕ ಕುಮಾರ ಬಂಗಾರಪ್ಪ ಅವರ ಆಪ್ತ ಸಹಾಯಕ ಹಾಗೂ ಇತರರಿಗೆ ಅಕ್ರಮವಾಗಿ ಭೂಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಕುಂಬತ್ತಿ ಗ್ರಾಮಸ್ಥರು, ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕುಂಬತ್ತಿಯಿಂದ ಸೊರಬ ತಾಲೂಕು ಕಚೇರಿ ತನಕ ಶುಕ್ರವಾರ ಪಾದಯಾತ್ರೆ ನಡೆಸಿ, ಪ್ರತಿಭಟಿಸಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ಮಹೇಶ್ ಮಾತನಾಡಿ, ಕುಮಾರ್ ಬಂಗಾರಪ್ಪ ಆಪ್ತ ಸಹಾಯಕ ಉಮೇಶ್ ಗೌಡರ್ ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಮಾಜಿ ಸೈನಿಕರ ಕೋಟಾದಡಿ ಭೂ ಮಂಜೂರಾತಿಗಾಗಿ ಅನೇಕ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಕುಂಬತ್ತಿ ಗ್ರಾಮದ ಸರ್ವೆ ನಂ.48/3ರಲ್ಲಿ ಉಮೇಶ್ ಹೆಸರಿಗೆ ನಾಲ್ಕು ಎಕರೆ ಜಮೀನನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದೆ ಎಂದರು.
ಶಾಸಕರ ಆಪ್ತ ಸಹಾಯಕ ಎಂದು ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡಿರುವುದು ಮಾತ್ರವಲ್ಲದೇ, ಅರ್ಜಿ ಸಲ್ಲಿಕೆಯ ವೇಳೆಯಲ್ಲಿ ಸಲ್ಲಿಸಿದ ದಾಖಲೆಗಳು ಸಹ ಪೂರ್ಣವಾಗಿಲ್ಲ. ಉಕ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಹೊಂದಿರುವ ಜಮೀನಿನ ಮಾಹಿತಿಯನ್ನು ನೀಡಿಲ್ಲ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಮಾಜಿ ಸೈನಿಕ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಯ ವೇತನ ದೃಢೀಕರಣವನ್ನು ಸಲ್ಲಿಸಿಲ್ಲ. ಜತೆಗೆ ಭೂಮಿಗಾಗಿ ಅರ್ಜಿಸಲ್ಲಿಸಿದ ಮಾಜಿ ಸೈನಿಕರ ಜೇಷ್ಠತಾ ಪಟ್ಟಿಯಲ್ಲಿಯೂ ಸಹ ಹೆಸರಿಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ. ಮತ್ತಿಬ್ಬರು ಬೇರ ಜಿಲ್ಲೆಯವರಾಗಿದ್ದಾರೆ. 36 ಮಾಜಿ ಸೈನಿಕರ ಅರ್ಜಿಗಳನ್ನು ಬಾಕಿ ಇಟ್ಟುಕೊಂಡು ಜ್ಯೇಷ್ಠತೆಯನ್ನು ಪರಿಗಣಿಸದೆ ಅಕ್ರಮವಾಗಿ ಭೂ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.
ಅರ್ಜಿ ಸಲ್ಲಿಕೆಯಾದ ಕೆಲವೇ ದಿನಗಳಲ್ಲಿ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಭೂ ಮಾಪಕರು ಕಡತವನ್ನು ಸಿದ್ಧಪಡಿಸಲಾಗಿದೆ. ಸ್ಥಳ ತನಿಖೆಯನ್ನು ನಡೆಸದೆ, ಸ್ಥಳೀಯ ಗ್ರಾಪಂಗೂ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಕ್ಷೇತ್ರದಲ್ಲಿ ಹಿಂದಿನ ಶಾಸಕರ ಅವಧಿಯ ವೇಳೆ ಬಗರ್‌ಹುಕುಂ ಮಂಜೂರಾತಿಯಲ್ಲಿ ನೆರೆಯ ತಾಲೂಕಿನವರಿಗೂ ಭೂಮಿ ಮಂಜೂರಾಗಿದೆ ಎಂದು ಆರೋಪಿಸುತ್ತಿದ್ದ ಕುಮಾರ್ ಬಂಗಾರಪ್ಪ, ಅರ್ಜಿ ಸಲ್ಲಿಸಿದ ಅರ್ಹ ಸೈನಿಕರನ್ನು ಪರಿಗಣಸದೇ ತಮ್ಮ ಆಪ್ತ ಸಹಾಯಕನಿಗೆ ಭೂಮಿ ಮಂಜೂರಾತಿ ದೊರಕಿಸಲು ಅನುವು ಮಾಡಿಕೊಟ್ಟಿರುವುದು ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.