

ಚನ್ನರಾಯಪಟ್ಟಣ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರದ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಅವರು ಭಾಷಣದ ನಡುವೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಎಂದು ಅವಹೇಳನ ಮಾಡಿದ್ದರ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕೃಷ್ಣರಾಜೇಂದ್ರ ವೃತ್ತದಲ್ಲಿ ಮಂಗಳವಾರ ಪಕ್ಷದ ತಾಲೂಕು ಘಟಕದ ಮುಖಂಡರು, ಕಾರ್ಯಕರ್ತರು ಜಮಾವಣೆಗೊಂಡು ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ ಈ ಸಂದರ್ಭ ಮಾತನಾಡಿ, ವಿಧಾನಸಭಾ ಕ್ಷೇತ್ರದ ಪ್ರಚಾರದ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಉರ್ದು ಭಾಷೆಯಲ್ಲಿ ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದು ಆರೊಪಿಸಿದರು. ಕಪ್ಪು ವರ್ಣದವರೆಂದು ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಜನಾಂಗೀಯ ದ್ವೇಷದ ಮಾತುಗಳನ್ನು ಜಮೀರ್ ಅವರು ಆಡಿರುವುದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಹಿಂದ ಹೆಸರಲ್ಲಿ ಹಿಂದು ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವ, ಪ್ರಚೋದಿಸುವ ಮಾತುಗಳು ಬರುತ್ತಿವೆ. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಪುರಸಭೆ ಅಧ್ಯಕ್ಷೆ ಬನಶಂಕರಿ, ಸದಸ್ಯರಾದ ಲಕ್ಷ್ಮೀ, ಧರಣೇಶ, ಸುರೇಶ, ಕವಿತಾರಾಜು, ಮಾಜಿ ಸದಸ್ಯರಾದ ಸಿ.ಟಿ.ಅಶೋಕ ಕುಮಾರ್, ಅನ್ಸರ್, ಜಬೀವುಲ್ಲಾ ಬೇಗ್, ಮುಖಂಡರಾದ ಅನ್ಸರ್ ಪಾಷಾ, ಅಕ್ಬರ್, ಅನಿಲ್ ಮರಗೂರು, ಪ್ರಕಾಶ, ರಂಗಸ್ವಾಮಿ, ರವೀಶ, ವೆಂಕಟೇಶ್ ಶಾಸಕರ ಆಪ್ತ ಸಹಾಯಕ ಸಾಗರ ಗೌಡ ಇತರರು ಇದ್ದರು.