ಕುಮಾರಸ್ವಾಮಿ ಕುಟುಂಬವೇ ರಾಜಕಾರಣ ಮಾಡುತ್ತಿದೆ: ಆರೋಪ

Published on

ಮೈಸೂರು: ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರಾಜಕಾರಣದಿಂದ ತಮ್ಮ ಕುಟುಂಬದವರನ್ನು ಸದಾ ದೂರವೇ ಇಟ್ಟಿರುವ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಜೇಶ್ ದೂರಿದರು.
ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪ ಆಧಾರ ರಹಿತ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕೀಯ ದ್ವೇಷದಿಂದ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ತಂತ್ರವಾಗಿ ಇಂತಹ ಟೀಕೆ ಮಾಡಲಾಗುತ್ತಿದೆ. ಆದರೆ ಯತೀಂದ್ರ ಅವರು ಅಧಿಕಾರಕ್ಕಾಗಿ ಆಸೆಪಡದೆ ತಂದೆಗಾಗಿ ಕ್ಷೇತ್ರವನ್ನೇ ಬಿಟ್ಟುಕೊಟ್ಟು ತ್ಯಾಗ ಮಾಡಿದ್ದಾರೆ ಎಂದರು.
ಅಧಿಕಾರಕ್ಕೆ ಬಂದಾಗಲೆಲ್ಲ ತಮ್ಮ ಅಣ್ಣ, ತಮ್ಮ, ಕುಟುಂಬದವರನ್ನು ಸಿದ್ದರಾಮಯ್ಯ ದೂರವೇ ಇಟ್ಟಿದ್ದಾರೆ. ಆದರೆ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಎಚ್‌ಡಿಕೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ದೊಡ್ಡ ಸುದ್ದಿಯಾಗಿತ್ತು ಎಂದು ಹೇಳಿದರು.
ಎಚ್.ಡಿ.ರೇವಣ್ಣ, ಭವಾನಿ, ಪ್ರಜ್ವಲ್, ಸೂರಜ್ ಸೇರಿದಂತೆ ನಿಮ್ಮ ಕುಟುಂಬದ ಇನ್ನಿತರ ಸದಸ್ಯರು, ಸಂಬಂಧಿಗಳು ರಾಜಕೀಯ ಹಸ್ತಕ್ಷೇಪ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಹಾಗಾಗಿಯೇ ಜೆಡಿಎಸ್ ಅನ್ನು ಜನರು ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಗರ ಕಾರ್ಯದರ್ಶಿ ನವೀದ್ ಪಾಷ , ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾರ್ಯದರ್ಶಿ ಎಸ್.ಎ.ರಹೀಮ್, ಮುಖಂಡ ಕುರುಬಾರಹಳ್ಳಿ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net