ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ

ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ
Published on

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಗಡಿಭಾಗದ ಕಿತ್ತೂರಿನಲ್ಲಿ ಶ್ರೀ ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ಸಡಗರ ಸಂಭ್ರಮಗಳಿಂದ ನೆರವೇರಿತು.


ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾತ್ರಾ ಮಹೋತ್ಸವ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿತ್ತು.ದೇವಸ್ಥಾನದಲ್ಲಿ ಅಪಾರ ಭಕ್ತರು ಪೂಜೆ ಪುನಸ್ಕಾರ ಸಲ್ಲಿಸಿ ಭಕ್ತಿ ಸಮರ್ಪಿಸಿದರು.


ಜಾತ್ರಾ ಮಹೋತ್ಸವದಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶ್ರೀ ಕುಮಾರಲಿಂಗೇಶ್ವರ ದೇವರ ಉತ್ಸವದಲ್ಲಿ ಭಕ್ತರು ದೇವರ ಉತ್ಸವ ಅಡ್ಡೆ ಹೊತ್ತು ಕುಣಿದು ಭಕ್ತಿ ಪರಾಕಾಷ್ಠೆ ಮೆರೆದರು.


ಊರಿನ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮಸ್ಥರಿಗೆ ಮಡಿಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ದೇಶೀಯ ಕ್ರೀಡೆಗಳನ್ನು ನಡೆಸಿ ಮನರಂಜನೆ ನೀಡಲಾಯಿತು. ಗುರುವಾರ ಮಧ್ಯಾಹ್ನ ಗ್ರಾಮಸ್ಥರಿಗೆ ಸಾಮೂಹಿಕ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಗ್ರಾಮದ ಹಿರಿಯ ಮುಖಂಡ ಮಂಜಣ್ಣ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಿತ್ತೂರಿನ ಮೂಲ ಇತಿಹಾಸ, ರಾವಂದೂರಿನ ಕಿತ್ತೂರಿನಿಂದ ವಲಸೆ ಬಂದು ನೆಲೆಸಿದ ಹಿರಿಯರನ್ನು ಸ್ಮರಿಸಿದರು.


ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಿತ್ತೂರಿನ ಗತ ವೈಭವದ ಪ್ರತೀಕವಾಗಿರುವ ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಭಕ್ತರ ನಡುವಿನ ಬಾಂಧವ್ಯ ಬೆಸೆಯುವಲ್ಲಿ ಸಫಲವಾಗಿದೆ. ಗ್ರಾಮಸ್ಥರ ಒಗ್ಗಟ್ಟನ್ನು ನಿರೂಪಿಸಿದೆ ಎಂದರು.


ಸಮಾಜ ಸೇವಕ ಮದಲಾಪುರ ಮಂಜುನಾಥ್, ಇಂಜಿನಿಯರ್ ಸಚಿತ್, ಕೆ.ಎಸ್. ಪ್ರಭು, ವಿದ್ಯಾಸಾಗರ್, ಕೆ.ಪಿ. ನಿರಂಜನ್, ಕೆ.ವಿ. ಮಂಜುನಾಥ್, ವೀರಭದ್ರಪ್ಪ, ಗ್ರಾಪಂ ಉಪಾಧ್ಯಕ್ಷೆ ಕೆ.ಡಿ. ರೂಪ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net