

ಬೆಳಗಾವಿ: ಸದಾ ಕನ್ನಡ ಚಟುವಟಿಕೆಗಳ ತಾಣವಾಗಿ ಎರಡು ದಶಕ ಪೂರೈಸಿರುವ ಕುಮಾರ ಗಂಧರ್ವ ಕಲಾಮಂದಿರ ಇದೀಗ ಹೈಟೆಕ್ ಸ್ವರೂಪ ಪಡೆದುಕೊಂಡಿದೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲೋಕೋಪಯೋಗಿ ಮಹಾನಗರ ಪಾಲಿಕೆ 1.20 ಕೋಟಿ ರೂ. ವೆಚ್ಚ ಮಾಡಿವೆ.
ಗಡಿಭಾಗವಾದ ಬೆಳಗಾವಿ ನಗರದಲ್ಲಿ ನಿರಂತರವಾಗಿ ಕನ್ನಡಪರ ಚಟುವಟಿಕೆಗಳು, ಸಂಸ್ಕೃತಿ ಕಾರ್ಯಕ್ರಮಗಳು ನಡೆಯಬೇಕು ಎಂಬ ಉದ್ದೇಶದಿಂದ ನಿರ್ಮಾಣಗೊಂಡಿದ್ದ ಕುಮಾರ ಗಂಧರ್ವ ಕಲಾಮಂದಿರ 1999ರಲ್ಲಿ ಲೋಕಾರ್ಪಣೆಗೊಂಡಿತ್ತು. ಆದರೆ, ಸಮರ್ಪಕವಾಗಿ ನಿರ್ವಹಣೆ ಕೊರತೆ, ಆರ್ಥಿಕ ಸಮಸ್ಯೆ ಕಾರಣಗಳಿಂದಾಗಿ ಕಟ್ಟಡ ಸಂಪೂರ್ಣ ಹಾಳಾಗಿತ್ತು. ಇದರಿಂದ ಸಾರ್ವಜನಿಕರು ಕುಮಾರ ಗಂಧರ್ವ ಕಲಾಮಂದಿರ ಬಳಕೆ ಕಡಿಮೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ 2021ರಲ್ಲಿ ಕಲಾಮಂದಿರ ನವೀಕರಣ ಕಾಮಗಾರಿ ಆರಂಭವಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವಂತ ನಿಧಿ ಹಾಗೂ ಲೋಕೋಪಯೋಗಿ ಇಲಾಖೆಯ 88 ಲಕ್ಷ ರೂ. ಅನುದಾನದಲ್ಲಿ ವಿದ್ಯುತ್, ಶೌಚಗೃಹ, ಕುಡಿಯುವ ನೀರು, ವೇದಿಕೆ, ಕುರ್ಚಿಗಳು ಸೇರಿ ವಿವಿಧ ಹೈಟೆಕ್ ಸೌಲಭ್ಯ ಕಲ್ಪಿಸಿಲಾಗಿದೆ. ಇನ್ನೂ ಮಹಾನಗರ ಪಾಲಿಕೆಯ 32 ಲಕ್ಷರೂ. ಅನುದಾನದಲ್ಲಿ ಹೈಟೆಕ್ ಸೌಂಡ್ ಸಿಸ್ಟಂ, ವೈರಿಂಗ್, ಹೊರ ಆವರಣದಲ್ಲಿ ಊಟದ ಭವನ ಸೇರಿ ಇತರ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕುಮಾರ ಗಂಧರ್ವ ಕಲಾಮಂದಿರ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳಿಸಿ ಬುಕ್ಕಿಂಗ್ ಆರಂಭಿಸಲಾಗುವುದು. ಕಲಾಮಂದಿರಕ್ಕೆ ಎಲ್ಲ ರೀತಿಯ ಹೈಟೆಕ್ ಸೌಲಭ್ಯ ಕಲ್ಪಿಸಲಾಗಿದೆ.| ವಿದ್ಯಾವತಿ ಭಜಂತ್ರಿ ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಮಹಾನಗರ ಪಾಲಿಕೆಯ 32 ಲಕ್ಷ ರೂ. ಅನುದಾನದಲ್ಲಿ ಕುಮಾರ ಗಂಧರ್ವ ಕಲಾಮಂದಿರ ನವೀಕರಣ ಕಾಮಗಾರಿ, ಊಟದ ಭವನ ನಿರ್ಮಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾ.28ರಂದು ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ.| ಡಾ.ರುದ್ರೇಶ ಘಾಳಿ ಪಾಲಿಕೆ ಆಯುಕ್ತ