

ಕುಮಟಾ: ಮಾನೀರದಿಂದ ಹಂದಿಗೋಣವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ಈಗಿರುವ ರಾ.ಹೆ. 66 ನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸುವ ಬಗ್ಗೆ ರಾಷ್ಟಿ್ರಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ನಿರ್ಣಯಿಸಿದೆ ಎಂಬ ಮಾಹಿತಿ ಲಭಿಸಿದೆ.
ಜಿಲ್ಲೆಯಲ್ಲಿ ರಾ.ಹೆ.ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪನಿ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಿಲ್ಲ. ಇಲ್ಲಿ ಚತುಷ್ಪಥವೋ, ಬೈಪಾಸೋ ಎಂಬ ವಿವಾದದಲ್ಲಿ ವರ್ಷಗಳು ಕಳೆದುಹೋಗಿವೆ. ರಾ.ಹೆ. 66 ಚತುಷ್ಪಥ ಕಾಮಗಾರಿಯನ್ನು ಬೈಪಾಸ್ ಮಾಡುವ ಬಗ್ಗೆ ಈಗಾಗಲೇ ಗೆಜೆಟ್ ನೋಟಿಫಿಕೇಶನ್ ಆಗಿದೆ. ಅಂತೆಯೇ ಬೈಪಾಸ್ ವಿರೋಧಿ ಹೋರಾಟವೂ ಜೋರಾಗಿಯೇ ನಡೆದು, ಅತ್ತ ಚತುಷ್ಪಥವೂ ಇಲ್ಲ. ಇತ್ತ ಬೈಪಾಸ್ ಇಲ್ಲದೆ, ಪಟ್ಟಣ ವ್ಯಾಪ್ತಿಯ ರಾ. ಹೆದ್ದಾರಿಯ ಅಭಿವೃದ್ಧಿ ಕುಂಠಿತವಾಗಿ ಜನ ಹೈರಾಣಾಗಿದ್ದಾರೆ.
ಉಳಿದ ಎಲ್ಲ ಕಡೆಗಳಲ್ಲಿ ಚತುಷ್ಪಥ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ. ಕುಮಟಾ ಪಟ್ಟಣದಲ್ಲಿ ಈಗಿರುವ ಹೆದ್ದಾರಿಯನ್ನು ವಿಸ್ತರಣೆ ಮಾಡಿ ಚತುಷ್ಪಥ ಮಾಡುವಷ್ಟು ಭೂಮಿ ಸರ್ಕಾರದ ಅಧೀನದಲ್ಲಿಯೇ ಇದೆ. ಹೀಗಾಗಿ ರಸ್ತೆಯನ್ನು ಕನಿಷ್ಟ ಅಗಲಕ್ಕೆ ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲು ರಾ.ಹೆ.ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸಿ ಹೆಜ್ಜೆಯಿಡುತ್ತಿದೆ. ಹೆದ್ದಾರಿ ಮಧ್ಯದಲ್ಲಿ ಬ್ಯಾರಿಕೇಡ್ ಮಾದರಿ ಅಡ್ಡಗೋಡೆ ನಿರ್ವಿುಸಿ ಎರಡೂ ಕಡೆಗೆ ಸುಮಾರು 30 ಮೀ. ಅಗಲಕ್ಕೆ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲ ದಿನದ ಹಿಂದಷ್ಟೇ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ರಾ.ಹೆ.66 ರ ಮರುಡಾಂಬರೀಕರಣ ಮಾಡಲಾಗಿದ್ದು ಟೆಂಡರ್ ಆಗಿ 2 ತಿಂಗಳು ವಿಳಂಬವಾಗಿ ಕಾಮಗಾರಿ ನಡೆಸಲಾಗಿತ್ತು. ಈಗ ಪುನಃ ಅದೇ ರಸ್ತೆಗೆ ಚತುಷ್ಪಥದ ನಿರ್ಣಯ ಕೈಗೊಂಡು ಹಣ ಸುರಿಯಲು ಹೊರಟಿರುವುದು ಹಲವು ಅನುಮಾನಕ್ಕೆಡೆಮಾಡಿದೆ.
ಈ ಬಗ್ಗೆ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಚತುಷ್ಪಥ ನಿರ್ವಣಕ್ಕೆ ರಾಷ್ಟಿ್ರಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಣಯಿಸಿದೆ. ಈಗಿರುವ ಹೆದ್ದಾರಿಯಲ್ಲೇ ಲಭ್ಯವಿರುವ ಅಧಿಗ್ರಹಿತ ಭೂಮಿಯಲ್ಲಿ ಚತುಷ್ಪಥ ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ಹೀಗೆ ಮಾಡಿದರೆ ಹೊಸದಾಗಿ ಯಾವುದೇ ಭೂಮಿ ಸ್ವಾಧೀನ ಮಾಡಬೇಕಾಗಿಲ್ಲ. ಐಆರ್ಬಿಯವರೇ ಬಹುಶಃ ಕಾಮಗಾರಿ ನಡೆಸಲಿದ್ದಾರೆ. ಹಾಗೆಂದು ಬೈಪಾಸ್ ಅಧಿಕೃತವಾಗಿ ರದ್ದಾಗಿಲ್ಲ. ಆ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಮಟಾ ಪಟ್ಟಣ ವ್ಯಾಪ್ತಿಯೊಳಗೆ ಚತುಷ್ಪಥ ಮಾಡುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಣಯಿಸಿದ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟ ವಿವರ ಪಡೆಯುತ್ತೇನೆ. | ದಿನಕರ ಶೆಟ್ಟಿ ಶಾಸಕ