

ಸೊರಬ: ಹಣಕಾಸು ವಹಿವಾಟು ನಡೆಸಲು ಸಂಘದ ಕಚೇರಿಯಲ್ಲಿ ಡಿಸಿಸಿ ಬ್ಯಾಂಕಿನ ಶಾಖೆಯನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಜಿ.ಟಿ.ಸೋಮಪ್ಪ ಹೇಳಿದರು.
ತಾಲೂಕಿನ ಕುಪ್ಪಗಡ್ಡೆಯ ಎಪಿಎಂಸಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತಾಪಿ ವರ್ಗದ ಅನುಕೂಲತೆಗೆ ತಕ್ಕಂತೆ ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗೆ ಸವಲತ್ತುಗಳನ್ನು ಒದಗಿಸುವುದು ಮುಖ್ಯ. ಇದಕ್ಕೆ ಸಂಘದ ಸರ್ವ ಸದಸ್ಯರ ಸಹಕಾರ ಅಗತ್ಯ. ಸಣ್ಣ ರೈತರಿಗೆ ಆಸರೆಯಾಗಿರುವ ಕೃಷಿ ಪತ್ತಿನ ಸಹಕಾರ ಸಂಘಗಳ ಉಳಿವಿಗೆ ನಿರ್ದೇಶಕರು ಮತ್ತು ಷೇರುದಾರರು ಆಸಕ್ತಿ ವಹಿಸಿ ಹೆಚ್ಚು ಹೆಚ್ಚು ಠೇವಣಿ ಹೂಡಿಕೆ ಮಾಡಲು ಮುಂದಾಗಬೇಕು ಎಂದರು.
ಸಂಘದಲ್ಲಿ 820 ಷೇರುದಾರರಿದ್ದು 25,27 ಕೋಟಿ ರೂ.ಗೂ ಅಧಿಕ ವಹಿವಾಟು ಮಾಡಿದೆ. ಗೊಬ್ಬರ, ಕ್ರಿಮಿನಾಶಕ ಹಾಗೂ ಬಿತ್ತನೆ ಬೀಜಗಳ ಮಾರಾಟದಿಂದ 8.33 ಲಕ್ಷ ರೂ.ಗೂ ಹೆಚ್ಚು ಲಾಭ ಗಳಿಸಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ನಿಂಗಪ್ಪ ವಾರ್ಷಿಕ ವರದಿ ಮಂಡಿಸಿದರು. ಕ್ಷೇತ್ರಾಧಿಕಾರಿ ಶರಣಪ್ಪ, ಉಪಾಧ್ಯಕ್ಷ ಇಲಿಯಾಸ್ ಕೆರೆಕೊಪ್ಪ, ನಿರ್ದೇಶಕರಾದ ಎಲ್.ಜಿ.ರಾಜಶೇಖರ್, ಗಂಗಪ್ಪ ಹಾಯ, ಶಿವಲಿಂಗಪ್ಪ ಕುಪ್ಪಗಡ್ಡೆ, ಎಚ್.ನಾಗರಾಜಪ್ಪ ಬಿದರಗೇರಿ, ಇ.ಎಚ್.ಮಹೇಶ್ ಕುಪ್ಪಗಡ್ಡೆ, ಪುಟ್ಟಮ್ಮ ಬೊಮ್ಮನಹಳ್ಳಿ, ವಿಜಯ ಕುಪ್ಪಗಡ್ಡೆ, ಹುಳ್ಯಮ್ಮ ಕೊರಕೋಡು, ಸಿಬ್ಬಂದಿ ಎಚ್.ಡಿ.ನರೇಂದ್ರಕುಮಾರ್, ಪ್ರವೀಣ್‌ಕುಮಾರ್, ಟಿ.ಎಸ್.ಸುಮಂತ್, ಎಸ್.ಸುಷ್ಮಾ ರವಿ ಇತರರಿದ್ದರು.