

ಮೂಡಿಗೆರೆ: ಕುನ್ನಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ಗುರುವಾರ ಹಗಲು ಹೊತ್ತಿನಲ್ಲಿ ರಸ್ತೆಗಳಲ್ಲಿ ಅತ್ತಿತ್ತ ಓಡಾಡಿಕೊಂಡು ಕಾಫಿ ತೋಟಕ್ಕೆ ನುಗ್ಗಿ ಗಿಡಗಳನ್ನು ಧ್ವಂಸ ಮಾಡಿವೆ.
ಗ್ರಾಮದ ಧರ್ಮಪಾಲ್, ರವೀಂದ್ರ, ಶ್ರೀಕಾಂತ್, ರವಿ ಸೇರಿದಂತೆ ಬಹುತೇಕ ರೈತರ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆಗಳು ತೋಟಗಳಲ್ಲಿ ಗಿಡಗಳನ್ನು ನಾಶ ಮಾಡಿವೆ. ಹಳಸೆ, ಕುನ್ನಳ್ಳಿ ರಸ್ತೆಯಲ್ಲಿ ಆನೆಗಳು ಸಂಚರಿಸಿದ್ದರಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ. ಗುರುವಾರ ಬೆಳಗ್ಗೆ ರೈತರು ಮತ್ತು ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಿದಾಗ ತೋಟದಲ್ಲಿ ಗಿಡಗಳು ಧ್ವಂಸವಾಗಿರುವುದು ಕಂಡು ಬಂದಿದೆ. ಇದರಿಂದ ಭಯಗೊಂಡ ರೈತರು ಮತ್ತು ಕಾರ್ಮಿಕರು ವಾಪಸ್ ಮನೆಗೆ ಬಂದಿದ್ದಾರೆ. ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ತೆರಳಲು ಸಾಧ್ಯವಾಗಿಲ್ಲ. ಮಾಕೋನಹಳ್ಳಿ, ನಂದಿಪುರ, ಹಳಸೆ, ಕುನ್ನಳ್ಳಿ, ಹಳೇಮೂಡಿಗೆರೆ ಭಾಗದಲ್ಲಿ ನಾಲ್ಕೈದು ಗುಂಪುಗಳಾಗಿ ಕಾಡಾನೆಗಳು ನಿರಂತರವಾಗಿ ಸಂಚರಿಸುತ್ತಿವೆ. ಅರಣ್ಯ ಇಲಾಖೆಯ ಟಾಸ್ಕ್ ಫೋರ್ಸ್ ಸಿಬ್ಬಂದಿ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಕಾಡಾನೆ ಇರುವ ಪ್ರದೇಶದ ಬಗ್ಗೆ ಆಗಾಗ ಸಂದೇಶ ರವಾನಿಸುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಪಟಾಕಿ ಸಿಡಿಸಿ ಕಾಡಾನೆಗಳನ್ನು ಗ್ರಾಮದಿಂದ ಅಟ್ಟುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೆ ಕಾಡಾನೆಗಳನ್ನು ಗ್ರಾಮದಿಂದ ಓಡಿಸದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.