ಕುದಿಸಿ, ಆರಿಸಿದ ನೀರು ಕುಡಿಯಿರಿ

27 YERRISWAMY 05
Published on

ಬಳ್ಳಾರಿ : ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ವಾಂತಿ ಬೇಧಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕುದಿಸಿ ಆರಿಸಿದ ನೀರು ಕುಡಿಯಬೇಕು ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.
ತಾಲೂಕಿನ ವೈ. ಕಗ್ಗಲ್ ಗ್ರಾಮದಲ್ಲಿ ಶಂಕಿತ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು. ಇಲಾಖೆಯಿಂದ ನೀಡುವ ಒಆರ್‌ಎಸ್ ಪೊಟ್ಟಣವನ್ನು ನೀರಿನಲ್ಲಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಭೇದಿ ಭಾದಿತರಿಗೆ ಕುಡಿಯಲು ಕೊಡಬೇಕು. ಪ್ರಸ್ತುತ ಗ್ರಾಮದಲ್ಲಿ ರೋಗ ಸಂಪೂರ್ಣ ನಿಯಂತ್ರಣದಲ್ಲಿದ್ದು, ಡಿಸಿ ಹಾಗೂ ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ದಿನದ 24 ಗಂಟೆ ವೈದ್ಯಕೀಯ ತಂಡ ಸ್ಥಳದಲ್ಲಿಯೇ ಇದ್ದು, ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದರು. ವಾಂತಿ-ಭೇದಿ ಅಥವಾ ಕಾಲರಾ ಸೋಂಕಿತರಿಗೆ ಮನೆಯಲ್ಲಿಯೆ ತಯಾರಿಸಿದ ಗಂಜಿ, ಬೇಳೆ ತಿಳಿ, ನಿಂಬು ಪಾನಕ ಹಾಗೂ ಎಳೆನೀರು ಕೊಡುವುದನ್ನು ನಿಲ್ಲಿಸಬಾರದು ಎಂದು ಹೇಳಿದರು.
ಅಧಿಕಾರಿಗಳಾದ ಈಶ್ವರ ಎಚ್. ದಾಸಪ್ಪನವರ, ಡಾ.ಸಾತ್ವಿಕ್, ಡಾ.ಪ್ರಸನ್ನ, ಸಿಎಚ್‌ಒ ಮೌನಿಕ, ಸಂತೋಷ ಕವಿತ, ಬಿಎಚ್‌ಇಒ ಶಾಂತಮ್ಮ ಉಪ್ಪಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net