ಕುಣಿದು ಕುಪ್ಪಳಿಸಿದ ಯುವಕರು

12 vikram 1B
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ 26ನೇ ರಾಷ್ಟ್ರೀಯ ಯುವ ಸಮ್ಮೇಳನದ ಉದ್ಘಾಟನೆ ಸಮಾರಂಭಕ್ಕೆ ಗುರುವಾರ ವಿಶೇಷ ರೈಲು ಮೂಲಕ ತೆರಳಿದ ಯುವಕರು ಧಾರವಾಡ ರೈಲು ನಿಲ್ದಾಣ ಆವರಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಯುವಕರಿಗೆ ವ್ಯವಸ್ಥೆ ಕಲ್ಪಿಸಿರುವ ಕೃಷಿ ವಿಶ್ವ ವಿದ್ಯಾಲಯದಿಂದ ಬಸ್ ಮೂಲಕ ರೈಲು ನಿಲ್ದಾಣಕ್ಕೆ ಆಗಮಿಸಿದ ಸುಮಾರು 4000 ಯುವಕರಿಗೆ 12, 12.30 ಹಾಗೂ 1 ಗಂಟೆಗೆ ತಲಾ 18 ಬೋಗಿಗಳ ಒಟ್ಟು ಮೂರು ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿತ್ತು. ರೈಲ್ವೆ ಅಧಿಕಾರಿಗಳು ಸಮಗ್ರ ತಪಾಸಣೆ ನಡೆಸಿ ಯುವಕರಿಗೆ ಮಾತ್ರ ತೆರಳಲು ಅವಕಾಶ ನೀಡಿದರು.
ತಮ್ಮ ರಾಜ್ಯಗಳ ವಿಶೇಷ ಉಡುಪಿನಲ್ಲಿ ಅವಧಿಗೂ ಮುನ್ನವೇ ಆಗಮಿಸಿದ್ದ ಯುವಕರು ರೈಲ್ವೆ ಆವರಣದಲ್ಲಿ ಆಯಾ ರಾಜ್ಯದ ಪ್ರಸಿದ್ಧ ಕಲೆಗಳನ್ನು ಪ್ರದರ್ಶಿಸಿದರು. ಇದಲ್ಲದೆ ಸ್ಥಳೀಯ ಡೊಳ್ಳು, ತಾಳಕ್ಕೆ ಮನಸೋತ ಯುವಕರು ರಾಜ್ಯದ ಬೇಧ ಭಾವ ಇಲ್ಲದೆ ಯುವಕರು, ಯುವತಿಯು ಒಟ್ಟಾಗಿ ಸೇರಿ ಕುಣಿದು ಖುಷಿಪಟ್ಟರು.
ಸೆಲ್ಫಿ: ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ್ದ ಯುವಕರ ಉಡುಪು ಕಂಡ ಸ್ಥಳೀಯರು ಅವರನ್ನು ಮಾತನಾಡಿಸಿ ತಮ್ಮ ಪರಿಚಯ ಮಾಡಿಕೊಳ್ಳುವುದರ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದರ ಜತೆಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಒಟ್ಟಾಗಿ ಸೇರಿ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಲೇ ಇತರರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
----ಬಾಕ್ಸ್----
ಐ ಲವ್ ಧಾರವಾಡ
ಧಾರವಾಡ ರೈಲು ನಿಲ್ದಾಣ ನವೀಕರಣ ಸಮಯದಲ್ಲಿ ಐ ಲವ್ ಧಾರವಾಡ ಎಂಬ ಫಲಕ ಅಳವಡಿಸುವ ಮೂಲಕ ಒಂದು ರೀತಿಯಲ್ಲಿ ಸೆಲ್ಫಿ ವೇದಿಕೆ ಮಾಡಿದಂತಾಗಿದೆ. ಈ ಫಲದ ಎದುರು ಎಲ್ಲ ರಾಜ್ಯದ ಯುವಕರು ನಿಂತು ತಮ್ಮ ತಂಡದೊಂದಿಗೆ ಫೋಟೊ ತೆಗೆಸಿಕೊಂಡು ಧಾರವಾಡ ಭೇಟಿಯನ್ನು ಸ್ಮರಣೀಯವಾಗಿಸಿಕೊಂಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net