

ವಿಜಯವಾಣಿ ಸುದ್ದಿಜಾಲ ಕುಣಿಗಲ್ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆ ಅಧ್ಯಕ್ಷ ರಂಗಸ್ವಾಮಿ 2022-23ನೇ ಸಾಲಿನ 35.51 ಲಕ್ಷ ರೂಪಾಯಿ ವೆಚ್ಚದ ಉಳಿತಾಯ ಬಜೆಟ್ ಅನ್ನು ಶುಕ್ರವಾರ ಮಂಡಿಸಿದರು. ವಿವಿಧ ಬಾಬ್ತುಗಳಿಂದ 33.18 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ 42.37 ಕೋಟಿ ರೂಪಾಯಿಯನ್ನು ಪಟ್ಟಣದ ಅಭಿವೃದ್ಧಿಗೆ ವಿನಿಯೋಗಿಸಲು ತೀರ್ಮಾನಿಸಲಾಯಿತು. ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ 2.30 ಕೋಟಿ ರೂ., ಖಾಸಗಿ ಹಣಕಾಸು ಸಂಸ್ಥೆ, ಟವರ್‌ಗಳಿಂದ 20 ಲಕ್ಷ ರೂ., ಅಂಗಡಿ ಹಾಗೂ ಮಾರುಕಟ್ಟೆ ಮಳಿಗೆಗಳಿಂದ 35ಲಕ್ಷ ರೂ., ಉದ್ದಿಮೆ ಪರವಾನಗಿ, ಖಾತೆ ನಕಲು, ಖಾತೆ ಬದಲಾವಣೆಯಿಂದ 89 ಲಕ್ಷ ರೂ., ಹಣಕಾಸು ಆಯೋಗ ವೇತನ, ವಿದ್ಯುತ್ ವೆಚ್ಚ, ಕುಡಿಯುವ ನೀರಿನ ಅನುದಾನಕ್ಕೆ ಸಂಬಂಧಿಸಿದಂತೆ 6ಕೋಟಿ ರೂ., ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4( ಸಿ.ಎಂ.ಎಸ್.ಟಿ.ಡಿ.ಪಿ) ಅನುದಾನ 10 ಕೋಟಿ ರೂ., ಬರ ಪರಿಹಾರ ಎಸ್‌ಎಫ್‌ಸಿ ಕುಡಿಯುವ ನೀರು ಕಾಮಗಾರಿಗಳಿಂದ 10 ಲಕ್ಷ ರೂ., 15ನೇ ಕೇಂದ್ರ ಹಣಕಾಸು ಯೋಜನೆಯಡಿ 2 ಕೋಟಿ ರೂ., ಆಶ್ರಯ ಯೋಜನೆ ಜಮೀನು ಅಭಿವೃದ್ಧಿಪಡಿಸಲು 20 ಲಕ್ಷ ರೂ. ಅನುದಾನ ಸೇರಿ ಇತರ ವಿವಿಧ ಮೂಲಗಳಿಂದ 33,18 ಕೋಟಿ ರೂ ಆದಾಯ ನಿರೀಕ್ಷಿಸಲಾಗಿದೆ. ಹೀಗಿದೆ ಖರ್ಚಿನ ವಿವರ: ಬೀದಿದೀಪ, ಕುಡಿಯುವ ನೀರು ಸರಬರಾಜು, ವಿದ್ಯುತ್ ವೆಚ್ಚ 4.50 ಕೋಟಿ ರೂ., ಘನತಾಜ್ಯ ವಸ್ತು ವಿಲೇವಾರಿ ನಿವಾರಣೆಗೆ 1.5 ಕೋಟಿ ರೂ., ಘನತಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 2 ಕೋಟಿ ರೂ., ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ 4 ಕೋಟಿ ರೂ., ಪುರಸಭೆ ಕಟ್ಟಡ ಅಭಿವೃದ್ಧಿಗೆ 2.58 ಕೋಟಿ ರೂ., ಪಟ್ಟಣದಲ್ಲಿನ ಉದ್ಯಾನವನಗಳ ಅಭಿವೃದ್ಧಿಗೆ 65 ಲಕ್ಷ ರೂ., ಸ್ಮಶಾನಗಳ ಅಭಿವೃದ್ಧಿ 20 ಲಕ್ಷ ರೂ., ಪ.ಜಾತಿ, ಪ.ಪಂಗಡ ಕಲ್ಯಾಣಕ್ಕಾಗಿ ಹಾಗೂ ಬಡ ಜನರ ಕಲ್ಯಾಣಕ್ಕಾಗಿ 1.43 ಕೋಟಿ ರೂ., ಎಸ್ಸಿ, ಎಸ್ಟಿ ಸ್ಮಶಾನ ಅಭಿವೃದ್ಧಿಗೆ 10 ಲಕ್ಷ ರೂ., ಹುಚ್ಚಮಾಸ್ತಿಗೌಡ ಸರ್ಕಲ್‌ನಲ್ಲಿ ಕುಣಿಗಲ್ ಕುದುರೆ ಪ್ರತಿಮೆ ಅನಾವರಣಕ್ಕೆ 15 ಲಕ್ಷ ರೂ., ಪಟ್ಟಣದಲ್ಲಿ ವನ ಸಂವರ್ಧನೆಗಾಗಿ 15 ಲಕ್ಷ ರೂ., ವಾರ್ಡ್‌ಗಳ ಪ್ರಮುಖ ರಸ್ತೆಗಳಿಗೆ ನಾಮಫಲಕ ಅಳವಡಿಕೆಗೆ 20 ಲಕ್ಷ ರೂ., ರಂಗಮಂದಿರ ಅಭಿವೃದ್ಧಿಗೆ 5 ಲಕ್ಷ ರೂ., ಸೇರಿ ನಿರೀಕ್ಷೆಯಂತೆ 42.53 ಕೋಟಿ ರೂ. ಖರ್ಚು ಮಾಡಲು ಒಪ್ಪಿಗೆ ಸೂಚಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ತಬಸಮ್ ಉನ್ನೀಸ, ಮುಖ್ಯಾಧಿಕಾರಿ ಬಿ. ಶಿವಪ್ರಸಾದ್, ಸದಸ್ಯರಾದ ಬಿ.ಎನ್.ಅರುಣ್ ಕುಮಾರ್, ಜಯಲಕ್ಷ್ಮೀ, ಮಂಜುಳಾ, ಕೋಟೆ ನಾಗಣ್ಣ, ಕೃಷ್ಣ, ರೂಪಿಣಿ, ಮಲ್ಲಿಪಾಳ್ಯ ಶ್ರೀನಿವಾಸ್, ಉದಯ್, ನಾಗರಾಜು, ಪುರಸಭೆ ಲೆಕ್ಕ ಪರಿಶೋಧಕಿ ರೂಪಾ, ಎಂಜಿನಿಯರ್ ಸುಮಾ, ಚಂದ್ರಶೇಖರ್ ಇದ್ದರು.
ಇದೇ ಪ್ರಥಮ ಬಾರಿಗೆ ಪಟ್ಟಣದಲ್ಲಿ ವನ ಸಂವರ್ಧನೆ, ಪತ್ರಕರ್ತರ ಆರೋಗ್ಯ ವಿಮೆಗೆ 2 ಲಕ್ಷ ರೂ., ಜಾನುವಾರುಗಳು ಆಕಸ್ಮಿಕವಾಗಿ ಮೃತಪಟ್ಟರೆ ಪರಿಹಾರವಾಗಿ ಒಂದು ಲಕ್ಷ ರೂ. ಮೀಸಲಿಡಲಾಗಿದೆ. ರಂಗಸ್ವಾಮಿ ಪುರಸಭೆ ಅಧ್ಯಕ್ಷ