ಕುಣಿಗಲ್ ಠಾಣೆಗೆ ಮುತ್ತಿಗೆ; ಸಬ್ ಇನ್‌ಸ್ಪೆಕ್ಟರ್ ಅಮಾನತಿಗೆ ಪಟ್ಟು

28 kunigal 1
Published on

ಕುಣಿಗಲ್: ಬೇಗೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಚ್.ನಾಗಾನಂದ ಅವರಿಗೆ ಕಪಾಳ ಮೋಕ್ಷ ಮಾಡಿರುವ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣ ಠಾಣೆಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ನಾರಾಯಣ್ ಎಂಬುವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿರುವ ಸಂಬಂಧ ವಿಚಾರಿಸಲು ಶನಿವಾರ ಬಂದ ಗ್ರಾಪಂ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಬಿ.ಎಚ್.ನಾಗಾನಂದ ಅವರನ್ನು ಪಿಎಸ್‌ಐ ಲಕ್ಷ್ಮಣ್ ಅವಾಚ್ಯವಾಗಿ ನಿಂದಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು.

ಪಿಎಸ್‌ಐ ಅವರ ಸಮವಸ್ತ್ರ ಕಳಚಿ ಹೊರಗೆ ಕಳಿಸಿ, ನಾವು ಸಮವಸ್ತ್ರ ಹಾಕಿಸುತ್ತೇವೆ ಎಂದು ಪ್ರತಿಭಟನಾಕಾರರರು ಆಕ್ರೋಶ ಹೊರಹಾಕಿದರು. ಪೊಲೀಸ್ ಠಾಣೆ ಇರುವುದು ಜನ ಸೇವೆಗಾಗಿ ಹಾಗೂ ದೌರ್ಜನ್ಯಕ್ಕೆ ಒಳಗಾದವರ ರಕ್ಷಣೆಗಾಗಿ. ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುವುದಕ್ಕೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಬಿ.ಎಚ್.ನಾಗಾನಂದ ಪ್ರಾಮಾಣಿಕರಾಗಿದ್ದು, ಅಂತಹವರ ಮೇಲೆ ದೌರ್ಜನ್ಯ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

ಬಿ.ಎಚ್.ನಾಗಾನಂದ ಮಾತನಾಡಿ, ಕಳವು ಸಂಬಂಧ ಅನುಮಾನದ ಮೇಲೆ ಗ್ರಾಮದ ನಾರಾಯಣ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ವಿಚಾರ ತಿಳಿದು, ಶನಿವಾರ ಬೆಳಗ್ಗೆ 11.20ರಲ್ಲಿ ಪೊಲೀಸ್ ಅಧಿಕಾರಿಗಳನ್ನು ಕಾಣಲು ಠಾಣೆಗೆ ಹೋದಾಗ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಹೀನಾಮಾನವಾಗಿ ಬೈದರು. ನನ್ನ ಅನುಮತಿ ಇಲ್ಲದೆ ಹೇಗೆ ಒಳಗೆ ಪ್ರವೇಶ ಮಾಡಿದೆ ಎಂದು ಕೆನ್ನೆಗೆ ಹೊಡೆದು ಕತ್ತಿನ ಮೇಲೆ ಗುದ್ದಿ, ಆಚೆಗೆ ಎಳೆದುಕೊಂಡು ಬಂದು ಬೂಟಿನಲ್ಲಿ ಒದೆಯುತ್ತೇನೆ ಎಂದು ಬೆದರಿಕೆ ಹಾಕಿದರು ಎಂದರು.

ನಾನೊಬ್ಬ ಜನಪ್ರತಿನಿಧಿಯಾಗಿದ್ದು, ನನ್ನ ಆತ್ಮ ಗೌರವಕ್ಕೆ ಧಕ್ಕೆ ಉಂಟಾಗಿದೆ. ನಾನೊಬ್ಬ ಜನಪ್ರತಿನಿಧಿಯಾಗಿ ಠಾಣೆಗೆ ಭೇಟಿ ನೀಡುವುದು ಅಪರಾಧವೇ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇನೆ ಎಂದು ಪಿಎಸ್‌ಐ ಬೆದರಿಕೆ ಹಾಕಿದ್ದಾರೆ. ಕಾನೂನು ರೀತಿ ಕ್ರಮ ಜರುಗಿಸಿ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಮನವೊಲಿಕೆ ನಂತರ ಹೋರಾಟ ವಾಪಸ್: ಪಿಎಸ್‌ಐ ವಿರುದ್ಧ ನೀಡಿರುವ ದೂರಿನ ಸಂಬಂಧ ಕ್ರಮಕೈಗೊಳ್ಳುತ್ತೇವೆ, ಹಾಗಾಗಿ ಪ್ರತಿಭಟನೆ ಕೈ ಬಿಡುವಂತೆ ಸಿಪಿಐ ಗುರುಪ್ರಸಾದ್ ಮನವಿ ಮಾಡಿದರು. ಸೇವೆಯಿಂದ ಪಿಎಸ್‌ಐ ಅಮಾನತು ಮಾಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್ ಬಲರಾಮ ಅವರು ಡಿವೈಎಸ್‌ಪಿ ಜಗದೀಶ್ ಅವರೊಂದಿಗೆ ಚರ್ಚೆ ನಡೆಸಿದರು. ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿ ನೀಡಿ ತಪ್ಪಿಸ್ಥರೆಂದು ಕಂಡು ಬಂದಲ್ಲಿ ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ಡಿವೈಎಸ್‌ಪಿ ತಿಳಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.

ಮೇ 27ರಂದು ಬೇಗೂರು ಗ್ರಾಪಂ ಅಧ್ಯಕ್ಷ ಚುನಾವಣೆ ವೇಳೆ ಗ್ರಾಪಂ ಕಚೇರಿ ಹೊರಗಡೆ ಓಡಾಡುತ್ತಿದ್ದೆ. ಚುನಾವಣೆ ಕರ್ತವ್ಯದಲ್ಲಿದ್ದ ಪಿಎಸ್‌ಐ ಲಕ್ಷ್ಮಣ್ ಏಕೆ ತಿರುಗಾಡುತ್ತೀಯ ಎಂದು ಕೇಳಿದ್ದರು. ನಾನಿಲ್ಲಿ ಗ್ರಾಪಂ ಸದಸ್ಯ ಎಂದು ಹೇಳಿದೆ, ಹಾಗಾದರೆ ಒಳಗೆ ಹೋಗು ಎಂದು ಹೇಳಿದರು, ಇನ್ನೂ ಸಮಯವಿದೆ ಹೋಗುತ್ತೇನೆ ಎಂದು ಹೇಳಿದೆ, ಇದರಿಂದ ಕುಪಿತಗೊಂಡು, ಹಳೇ ದ್ವೇಷ ಮನದಲ್ಲಿಟ್ಟುಕೊಂಡು ನನ್ನ ಮೇಲೆ ಹಲ್ಲೆ ಮಾಡಿದರು. - ಬಿ.ಎಚ್.ನಾಗಾನಂದ ಬೇಗೂರು ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net