

ವಿಜಯವಾಣಿ ಸುದ್ದಿಜಾಲ ಗೋಕರ್ಣ
ಕುಡ್ಲೆ ಸಮುದ್ರದಲ್ಲಿ ಈಜಲು ತೆರಳಿ ನೀರಿನ ಸುಳಿಗೆ ಸಿಕ್ಕು ಅಪಾಯದಲ್ಲಿದ್ದ ತೆಲುಗು ಯುವ ನಟ ಅಖಿಲ್ ರಾಜ್(26) ಅವರನ್ನು ಬೀಚ್ನಲ್ಲಿ ರಕ್ಷಣಾ ಕಾರ್ಯ ನಿರ್ವಹಿಸುವ ಮಿಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಜೀವಾಪಾಯದಿಂದ ಪಾರುಮಾಡಿ ದಡಕ್ಕೆ ತಂದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸಮುದ್ರ ಒರಟಾಗಿರುವುದರಿಂದ ನೀರಿಗೆ ಇಳಿಯದಂತೆ ಸಿಬ್ಬಂದಿ ಎಚ್ಚರಿಸಿದ್ದರು. ಆದರೂ ಈಜಲು ತೆರಳಿ ದಡದಿಂದ ಅಂದಾಜು 50 ಮೀ. ದೂರ ಸಾಗುತ್ತಿದ್ದಂತೆ ಅಪಾಯಕ್ಕೆ ಸಿಲುಕಿದ ಅಖಿಲ್ ರಾಜ್ ರಕ್ಷಣೆಗೆ ಕೂಗಿಕೊಂಡರು. ತಕ್ಷಣ ಸ್ಪೀಡ್ ಬೋಟ್ನಲ್ಲಿ ತೆರಳಿದ ಇಬ್ಬರು ಸಿಬ್ಬಂದಿ ಯುವ ನಟನನ್ನು ಉಳಿಸಿ ತರುವಲ್ಲಿ ಸಫಲರಾದರು. ಈ ಬಗ್ಗೆ ಮಾತನಾಡಿದ ಅಡ್ವೆಂಚರ್ ಸಂಸ್ಥೆಯ ಗಣೇಶ ನಾಯಕ ವರ್ಷಕ್ಕೆ ಕಡಿಮೆಯೆಂದರೂ ಇಂತಹ 15 ಘಟನೆಗಳು ಬೀಚ್ನಲ್ಲಿ ನಡೆಯುತ್ತವೆ. ಸಮುದ್ರ ಒರಟಾಗಿದ್ದಾಗ ಬೀಚ್ನಲ್ಲಿ ಇರುವ ಸಿಬ್ಬಂದಿ ನೀರಿಗೆ ಇಳಿಯದಂತೆ ಎಚ್ಚರಿಸಿದರೂ, ಕೇಳದೆ ಹೋಗುವುದರಿಂದ ಇಂತಹ ಅಪಾಯ ಉಂಟಾಗುತ್ತಿದೆ. ಈ ನಟನಿಗೆ ಸಹ ಸಿಬ್ಬಂದಿ ನೀರಿಗೆ ಹೋಗಬೇಡಿ ಎಂದು ತಡೆದಿದ್ದರು. ಸಿಬ್ಬಂದಿಗೆ ಕೂಗಾಡಿ ನೀರಿಗಿಳಿದು ಅಪಾಯಕ್ಕೆ ಸಿಲುಕಿದ್ದರು. ಆದರೆ, ಇದೇ ಸಿಬ್ಬಂದಿ ಅವರನ್ನು ರಕ್ಷಿಸಿ ತಂದಾಗ ಕಲಾವಿದ ಸಿಬ್ಬಂದಿ ಕಾಲಿಗೊರಗಿ ಕ್ಷಮೆಯಾಚಿಸಿದ ಘಟನೆಯೂ ನಡೆಯಿತು ಎಂದು ಪತ್ರಿಕೆಗೆ ತಿಳಿಸಿದ್ದಾರೆ. ಅಡ್ವೆಂಚರ್ ಸಂಸ್ಥೆ ವಿಡಿಯೋ ಮಾಡಿರುವ ಸಂಪೂರ್ಣ ಕಾರ್ಯಾಚರಣೆ ಈಗ ವೈರಲ್ ಆಗಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.