ಕುಡುಕರ ಹಾವಳಿಗೆ ಬೇಕು ಕಡಿವಾಣ

12-RNR-01
Published on

ರಾಣೆಬೆನ್ನೂರ: ನಗರದ ಮುನ್ಸಿಪಲ್ ಮೈದಾನದ ಬಳಿಯಿರುವ ನಗರಸಭೆ ವಾಣಿಜ್ಯ ಮಳಿಗೆಗಳ ಬಳಿ ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ, ವ್ಯಾಪಾರಸ್ಥರು ಪರದಾಡುವಂತಾಗಿದೆ.

ಈ ಭಾಗದಲ್ಲಿ ನಗರಸಭೆ ಮಳಿಗೆಗಳನ್ನು ಬಾಡಿಗೆ ಪಡೆದ ವ್ಯಾಪಾರಸ್ಥರು ಜೋಳ, ಕಿರಾಣಿ ಸೇರಿ ವಿವಿಧ ಅಂಗಡಿಗಳನ್ನು ನಡೆಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಜನಸಂದಣಿ ಹೆಚ್ಚಾಗಿ ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮದ್ಯ ವ್ಯಸನಿಗಳು ನಿತ್ಯವೂ ಮಳಿಗೆಗಳ ಕಟ್ಟೆಗಳ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಪಾರ್ಸಲ್ ನೀಡುವ ಎರಡು ಮದ್ಯದ ಅಂಗಡಿಗಳಿವೆ. ಇಲ್ಲಿಂದ ಮದ್ಯ ಖರೀದಿಸುವ ಕುಡಕರು ಪಕ್ಕದಲ್ಲೇ ಇರುವ ಮಳಿಗೆಗಳ ಮುಂದೆ ಕುಳಿತು ಸೇವನೆ ಮಾಡುತ್ತಿದ್ದಾರೆ.

ಮದ್ಯದ ಸೇವಿಸಿ ಪ್ಯಾಕೇಟ್​ಗಳನ್ನು ರಸ್ತೆಯಲ್ಲೇ ಎಸೆದು ಹೋಗುತ್ತಿದ್ದಾರೆ. ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವ ಕಾರಣ ಸಂಪೂರ್ಣ ಮಾರುಕಟ್ಟೆ ಗಬ್ಬು ನಾರುತ್ತಿದೆ. ಹೀಗಾಗಿ, ಜನತೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ.

ಈ ಸಮಸ್ಯೆಯಿಂದಾಗಿ ವ್ಯಾಪಾರ-ವಹಿವಾಟಿಗೂ ತೊಂದರೆ ಉಂಟಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಈ ಭಾಗದಲ್ಲಿ ಮದ್ಯ ಸೇವಿಸಲು ಯಾರೂ ಬರದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಮಾಡಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ತ್ಯಾಜ್ಯ ವಿಲೇವಾರಿಯೇ ಇಲ್ಲ
ನಿತ್ಯವೂ ಮಾರುಕಟ್ಟೆ ಸ್ವಚ್ಛಗೊಳಿಸುವ ನಗರಸಭೆ ಸಿಬ್ಬಂದಿ ಸಹ ಇತ್ತ ಕಡೆ ತಿರುಗಿ ನೋಡುತ್ತಿಲ್ಲ. ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ, ಮಾರುಕಟ್ಟೆಯ ರಸ್ತೆ ಬದಿ ಎಲ್ಲಿ ನೋಡಿದರೂ ಮದ್ಯದ ಪ್ಯಾಕೇಟ್​ಗಳು ಬಿದ್ದಿರುತ್ತವೆ. ಸ್ವಚ್ಛತೆ ಮಾಡುವಂತೆ ನಗರಸಭೆ ಸಿಬ್ಬಂದಿಗೆ ತಿಳಿಸಿದರೂ ಯಾರೊಬ್ಬರೂ ಬರುವುದಿಲ್ಲ ಎಂಬುದು ಇಲ್ಲಿಯ ವ್ಯಾಪಾರಸ್ಥರ ಆರೋಪವಾಗಿದೆ.

ನೆಹರು ಮಾರುಕಟ್ಟೆ ನಗರಸಭೆ ಮಳಿಗೆ ಎದುರು ಮದ್ಯ ಸೇವಿಸುತ್ತಿರುವವರ ಕುರಿತು ಪೊಲೀಸರಿಗೆ ದೂರು ನೀಡಿ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸ್ವಚ್ಛತೆ ಕಾಪಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ. ನಿತ್ಯವೂ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. | ಡಾ. ಎನ್. ಮಹಾಂತೇಶ ನಗರಸಭೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net