ಕುಡುಕರ ಅಡ್ಡೆಯಾದ ಕೆ.ಆರ್.ಸಾಗರ ಹಿನ್ನೀರು ಪ್ರದೇಶ

ಕೆ.ಆರ್ . ಸಾಗರ ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಮದ್ಯದ ಖಾಲಿ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿರುವುದು.
ಕೆ.ಆರ್ . ಸಾಗರ ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಮದ್ಯದ ಖಾಲಿ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿರುವುದು.
Published on

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಹಿನ್ನೀರಿನ ತೀರ ಪ್ರದೇಶಗಳಲ್ಲಿ ಇತ್ತೀಚೆಗೆ ಕುಡುಕರ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಬಿಸಾಡಲಾಗುತ್ತಿದೆ.

ನದಿ ತೀರದ ಸೊಬಗು ಸವಿಯುತ್ತಾ ಮದ್ಯ ಸೇವಿಸಲು ಬರುವವರು ಖಾಲಿ ಬಾಟಲ್‌ಗಳನ್ನು ಅಲ್ಲೇ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ಈ ಪ್ರದೇಶ ಕುಡುಕರ ಅಡ್ಡೆಯಾಗಿಹೋಗಿದೆ.

ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿನ ನದಿ ತೀರದ ಎರಡೂ ಭಾಗಗಳ ಪ್ರದೇಶಗಳಿಗೆ ಸ್ನೇಹಿತರೊಂದಿಗೆ ಬರುವವರು ಪಾರ್ಟಿ ಮಾಡಲೆಂದು ಮದ್ಯ ಹಾಗೂ ತಿಂಡಿ ತಿನಿಸುಗಳನ್ನು ತರುತ್ತಾರೆ. ನಂತರ ಪ್ಲಾಸ್ಟಿಕ್ ಕವರ್, ಮದ್ಯದ ಬಾಟಲ್‌ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.
ಇನ್ನೂ ಕೆಲವರು ತಮ್ಮ ಮನೆಗಳಿಂದ ಅನುಪಯುಕ್ತ ಹಳೆಯ ಬಟ್ಟೆಗಳು, ಬೇಡದ ವಸ್ತುಗಳು ಹಾಗೂ ಮತ್ತಿತರ ತ್ಯಾಜ್ಯಗಳನ್ನು ತಂದು ನದಿ ತೀರದಲ್ಲಿ ಸುರಿದು ಹೋಗುತ್ತಿದ್ದು, ಇದರಿಂದಾಗಿ ನದಿ ತೀರವು ಕಸ ವಿಲೇವಾರಿ ಘಟಕ ಎಂಬಂತೆ ಕಾಣುತ್ತಿದೆ. ಇಡೀ ವಾತಾವರಣ ಹದಗೆಟ್ಟು, ಇಲ್ಲಿ ಸಂಗ್ರಹವಾಗುವ ತ್ಯಾಜ್ಯ ಹಿನ್ನೀರು ಸೇರುವುದು ಖಚಿತ.

ಅಲ್ಲದೆ, ಕೆಲವು ಪ್ರಭಾವಿ ವ್ಯಕ್ತಿಗಳು ನದಿ ತೀರದ ಎರಡೂ ಭಾಗಗಳಲ್ಲಿ ಜಮೀನುಗಳನ್ನು ಕೊಂಡು ಫಾರ್ಮ್‌ಹೌಸ್ ನೆಪದಲ್ಲಿ ರೆಸಾರ್ಟ್ ಮಾಡಿದ್ದಾರೆ. ನದಿ ತೀರದ ಒತ್ತುವರಿಯನ್ನೂ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಖುದ್ದು ಸ್ಥಳ ಪರಿಶೀಲನೆ ಮಾಡುವೆ. ಅಣೆಕಟ್ಟೆ ನಿರ್ಮಾಣದ ಸಮಯದಲ್ಲಿ ನದಿ ತೀರವನ್ನು ಗುರುತಿಸಿ ಬಾಂಡ್ ಕಲ್ಲುಗಳನ್ನು ಹಾಕಲಾಗಿತ್ತು. ತೀರದಲ್ಲಿರುವ ಜಮೀನು ಮಾಲೀಕರು ಕೆಲವು ಕಡೆ ಈ ಕಲ್ಲುಗಳನ್ನು ತೆಗೆದು ಒತ್ತುವರಿ ಮಾಡಿರುವ ಬಗ್ಗೆ ಮಾಹಿತಿ ಪಡೆದಿರುವೆ. ಇನ್ನು ನದಿ ತೀರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮದ್ಯ ಸೇವಿಸುವವರು ಮತ್ತು ತಾಜ್ಯ ತಂದು ಸುರಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಣೆಕಟ್ಟೆ ಭದ್ರತಾ ಪಡೆಗೆ ನಿಯೋಜನೆಗೊಂಡಿರುವ ಕೆಎಸ್‌ಐಎಸ್‌ಎಫ್‌ಗೆ ಸೂಚನೆ ನೀಡಲಾಗಿದೆ.
* ರಘುರಾಮ್, ಅಧೀಕ್ಷಕ ಅಭಿಯಂತರ, ಕಾವೇರಿ ನೀರಾವರಿ ನಿಗಮ, ಮಂಡ್ಯ ವೃತ್ತ

ಕಾವೇರಿ ನದಿ ಪರಿಶುದ್ಧವಾಗಿದೆ. ಜನರು ತಾವು ಕುಡಿಯುವ ನೀರನ್ನು ಯಾವುದೇ ರೂಪದಲ್ಲೂ ಕಲುಷಿತಗೊಳಿಸಬಾರದು. ಸರ್ಕಾರ ನದಿಯ ತೀರದಲ್ಲಿ ತಾಜ್ಯ ತಂದು ಸುರಿಯುವುದನ್ನು ತಡೆಯಲು ಯೋಜನೆ ರೂಪಿಸಬೇಕು. ನದಿ ತೀರದಲ್ಲಿ ಮದ್ಯದ ಬಾಟಲ್ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
* ಎಂ.ಬಿ.ಕುಮಾರ್, ಕೆ.ಆರ್.ಸಾಗರ, ಗ್ರಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net