

ಹುಲಸೂರು: ತಾಲೂಕಿನ ಎಲ್ಲ ಹಳ್ಳಿ ಅದರಲ್ಲೂ ವಿಶೇಷವಾಗಿ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಉಸ್ತುವಾರಿ ಆಡಳಿತಾಧಿಕಾರಿ ರಜನಿಕಾಂತ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸೂಕ್ತ ಮಾಹಿತಿ ನೀಡದೆ ಗೈರು ಹಾಜರಾದ ತಹಸೀಲ್ದಾರ್ ಸೇರಿ ೧೦ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಪಂ ಇಒ ವೈಜಣ್ಣ ಫುಲೆ ಅವರಿಗೆ ನಿರ್ದೇಶನ ನೀಡಿದರು.
ಕಾರ್ಮಿಕ, ಅರಣ್ಯ, ವಸತಿ ಯೋಜನೆ, ಪಶುಪಾಲನಾ, ಲೋಕೋಪಯೋಗಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸಭೆಗೆ ಬರದಿರುವುದನ್ನು ಕಂಡು ಸಿಡಿಮಿಡಿಗೊಂಡ ಅವರು, ಗೈರಾದ ಎಲ್ಲರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಜೆಜೆಎA ಅಧಿಕಾರಿ ತರಾಟೆಗೆ: ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ಕಳಪೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ ಯೋಜನೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ರಜನಿಕಾಂತ ಅವರು, ಪೈಪ್‌ಲೈನ್ ಅಳವಡಿಸಲು ಅಗೆದಿರುವ ಸಿಸಿ ರಸ್ತೆಗಳನ್ನು ಸರಿಪಡಿಸುವ ಗೋಜಿಗೂ ಹೋಗದ್ದರಿಂದ ಎಲ್ಲೆಡೆ ಅವ್ಯವಸ್ಥೆ, ರಸ್ತೆಯಲ್ಲಿನ ಗುಂಡಿಗಳು ವೃದ್ಧರು, ಮಕ್ಕಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ. ಆದಷ್ಟು ಬೇಗ ಸರಿಪಡಿಸುವಂತೆ ಸೂಚಿಸಿದರು.
ತಾಪಂ ಉದ್ಯೋಗ ಖಾತ್ರಿ ವಿಭಾಗದ ಅಧಿಕಾರಿ ಮಹಾದೇವ ಜಮ್ಮು, ಆರೋಗ್ಯಾಧಿಕಾರಿ ಶಶಿಕಾಂತ ಕನ್ನಾಡೆ ಇತರರಿದ್ದರು.