ಕುಡಿಯುವ ನೀರು ಸರಬರಾಜಿಗೆ ಆಗ್ರಹ

KANNADA
Published on


ಯಾದಗಿರಿ: ನಗರದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿರುವುದು ಖಂಡಿಸಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಇಲ್ಲಿನ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಅಧ್ಯಕ್ಷ ಚಂದ್ರಶೇಖರ ದಾಸನಕೇರಿ ಮಾತನಾಡಿ, ನಗರದಲ್ಲಿ ಕಳೆದ ವಾರದಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರು ನಿತ್ಯವೂ ಪರದಾಡುತ್ತಿದ್ದಾರೆ. ಮೊದಲೇ ನಗರದಲ್ಲಿ ಮಳೆ ಹೆಚ್ಚಾಗಿರುವುದರಿಂದ ತೊಂದರೆಯಲ್ಲಿರುವ ಜನತೆ ಇದೀಗ ನಲ್ಲಿಗಳಲ್ಲಿ ನೀರು ಬರದೆ ಇರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಡಹಬ್ಬವಾದ ದಸರಾ ಇರುವುದರಿಂದ ಕುಡಿಯಲು ಹಾಗೂ ಮನೆ ಶುಚಿಗೊಳಿಸಲು ನೀರಿನ ಅವಶ್ಯಕತೆ ಇದೆ. ಇನ್ನೆರಡು ದಿನಗಳಲ್ಲಿ ನಗರಕ್ಕೆ ನೀರು ಸರಬರಾಜು ಆಗದಿದ್ದರೆ ಸಾರ್ವಜನಿಕರೊಂದಿಗೆ ನಗರಸಭೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚಂದ್ರಶೇಖರ ಹಿರೇಮಠ, ರಫಿಕ್, ರಶುರಾಮ ಒಡೆಯರ್, ರಾಮು ನಾಟೆಕರ್, ವಾಸು ಬದ್ದೆಪಲ್ಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net