ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮವಹಿಸಿ

bkt-8-2
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ನೋಡಲ್ ಅಽಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಬರ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಜಲಾಶಯಗಳಲ್ಲಿ ಪ್ರಸ್ತುತ ಇರುವ ನೀರನ್ನು ೨೦೨೪, ಜುಲೈ ಮಾಹೆಯವರೆಗೆ ಕಾಯ್ದಿರಿಸಿ, ಕುಡಿಯಲು ಮಾತ್ರ ಬಳಸುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ೧೨ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಘಟಪ್ರಭಾ ನದಿಗೆ ಅವಲಂಬನೆಯಾಗಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ೬ ಟಿಎಂಸಿ ನೀರು ಬೇಕಾಗಬಹುದಾಗಿದೆ ಎಂದು ಅಂದಾಜಿಸಲಾಗಿದ್ದು, ನದಿಯ ನೀರನ್ನು ಕಾಯ್ದಿರಿಸುವ ಕೆಲಸವಾಗಬೇಕು ಎಂದರು.

ಬರಪೀಡಿತ ತಾಲೂಕುಗಳಿಗೆ ನೇಮಿಸಲಾದ ನೋಡಲ್ ಅಽಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತವಾಗಿ ಖಾಸಗಿ ಬೋರವೆಲ್‌ಗಳ ಮಾಲಿಕರ ಪಟ್ಟಿ ಮಾಡಿಕೊಳ್ಳಬೇಕು. ಜಾನುವಾರುಗಳಿಗೂ ಸಹ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ಮೇವಿನ ಕೊರತೆಯಾಗದಂತೆ ಕ್ರಮವಹಿಸಬೇಕು. ಇನ್ನು ೨ ದಿನಗಳಲ್ಲಿ ೬೦೭೬ ಮೇವಿನ ಬೀಜಗಳ ಮಿನಿ ಕಿಟ್‌ಗಳು ಬರಲಿದ್ದು, ನೀರಿನ ಲಭ್ಯತೆ ಹೊಂದಿರುವ ರೈತರಿಗೆ ವಿತರಿಸಿ, ಮೇವು ಬೆಳೆದ ಬಗ್ಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಬರದ ಹಿನ್ನಲೆಯಲ್ಲಿ ಜನರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಕೆಲಸದ ಬೇಡಿಕೆ ಇದ್ದಲ್ಲಿ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಅಲ್ಲಲ್ಲಿ ಕುಡಿಯುವ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ತಾಲೂಕಾ ಮಟ್ಟದ ಟಾಸ್ಕಪೋರ್ಸ ಸಭೆ ನಡೆಸಿ ಸೂಕ್ತ ಕ್ರಮವಹಿಸಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಂಡು ಶುದ್ದ ಕುಡಿಯುವ ನೀರು ಒದಗಿಸಲು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ತಹಸೀಲ್ದಾರರಾದ ಅಮರೇಶ ಪಮ್ಮಾರ, ಜೆ.ಬಿ.ಮಜ್ಜಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net