

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ್ದ ಮಹತ್ವಾಕಾಂಕ್ಷೆಯ ಎರಡು ಯೋಜನೆಗಳಿಗೆ ಮೇ 2 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳು ಇದ್ದು, 18.75 ಚದರ ಕಿ.ಮೀ ವಿಸ್ತೀರ್ಣವನ್ನು ಒಳಗೊಂಡಿದೆ. ಪ್ರಸ್ತುತ ಸುಮಾರು 86,000 ಜನಸಂಖ್ಯೆಯನ್ನು ಒಳಗೊಂಡಿದೆ. ನಗರಕ್ಕೆ 1ನೇ ಹಂತದ ನೀರು ಸರಬರಾಜು ಯೋಜನೆಯನ್ನು ಸುವರ್ಣಾವತಿ ನದಿಯಿಂದ 1963 ರಲ್ಲಿ 2.7 ಎಂಎಲ್‌ಡಿಗೆ ವಿನ್ಯಾಸಿಸಿ ಅನುಷ್ಠಾನಗೊಳಿಸಲಾಗಿತ್ತು. ಪ್ರಸ್ತುತ ನೀರಿನ ಲಭ್ಯತೆ ಇಲ್ಲದ ಕಾರಣ ಯೋಜನೆಯು ನಿರುಪಯುಕ್ತವಾಗಿತ್ತು. ಬಳಿಕ ಚಾಮರಾಜನಗರ ಮತ್ತು ಮಾರ್ಗ ಮಧ್ಯದ 28 ಹಳ್ಳಿಗಳಿಗೆ ಸೇರಿದಂತೆ ಟಿ.ನರಸೀಪುರ ಪಟ್ಟಣದ ಬಳಿಯ ಕಬಿನಿ ನದಿ ಮೂಲದಿಂದ 15 ಎಂಎಲ್‌ಡಿ ನೀರು ಸರಬರಾಜು ಮಾಡುವ 2ನೇ ಹಂತದ ಯೋಜನೆಯನ್ನು 2000 ರಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಪ್ರಸ್ತುತ 80 ಎಲ್‌ಪಿಸಿಡಿ ಯಷ್ಟು ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 135 ಎಲ್‌ಪಿಸಿಡಿ ನೀರನ್ನು ಸರಬರಾಜು ಮಾಡುವ ಅವಶ್ಯಕತೆ ಇದ್ದು, 2058 ನೇ ವರ್ಷಕ್ಕೆ ಅವಶ್ಯವಿರುವ 15 ಎಂಎಲ್‌ಡಿ ನೀರನ್ನು ಮಾಲಂಗಿ ಗ್ರಾಮದ ಬಳಿ ಕಾವೇರಿ ನದಿಮೂಲದಿಂದ ಸರಬರಾಜು ಮಾಡುವ ಯೋಜನೆಯನ್ನು ಕೈಗೊಳ್ಳುವುದು ಅವಶ್ಯಕವಾಗಿತ್ತು.
ಈ ನಿಟ್ಟಿನಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರಕ್ಕೆ ಮಾಲಂಗಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೂರನೇ ಹಂತದ ಕುಡಿಯುವ ನೀರು ಯೋಜನೆಗೆ 150 ಕೋಟಿ ರೂ, ಘೋಷಣೆ ಮಾಡಿತ್ತು. ಅದರಂತೆ ಮೇ.2 ರಂದು 158 ಕೋಟಿ ರೂ, ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈ ಮೂಲಕ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಮುಕ್ತಿ ದೊರೆತಂತಾಗುತ್ತದೆ.
ಮಹತ್ವಾಕಾಂಕ್ಷಿ ಯೋಜನೆ:
ಜಿಲ್ಲೆಯಾಗಿ ಚಾಮರಾಜನಗರ 25 ವರ್ಷಗಳು ಕಳೆದಿದ್ದರೂ, ಜಿಲ್ಲಾ ಕೇಂದ್ರಕ್ಕೆ ಸಮರ್ಪಕವಾಗು ಕುಡಿಯುವ ನೀರು ಪೂರೈಕೆ ಮಾಡಲು ಇಂದಿಗೂ ಸಾಧ್ಯವಾಗಿಲ್ಲ. ಟಿ.ನರಸೀಪುರ ಪಟ್ಟಣದ ಬಳಿಯ ಕಬಿನಿ ನದಿ ಮೂಲದಿಂದ ನೀರು ಎತ್ತುವ ಯಂತ್ರಗಳು ಪದೇಪದೇ ಕೆಟ್ಟು ಹೋಗುತ್ತಿದ್ದ ಸಂದರ್ಭದಲ್ಲಿ ನಗರದ ನಿವಾಸಿಗಳು ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಕೆಲವೊಂದು ವಾರ್ಡ್‌ಗಳಲ್ಲಿ ವಾರಗಟ್ಟಲೇ ನೀರು ಬರದೇ ಸಾರ್ವಜನಿಕರು ಪರಿತಪಿಸುವಂತಹ ಪರಿಸ್ಥಿತಿ ಇಂದಿಗೂ ಇದೆ. ಈ ನಿಟ್ಟಿನಲ್ಲಿ ಮಾಲಂಗಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ನೀರು ತರುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರದ ಮುಂದಿಡಲಾಗಿತ್ತು. ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಈ ಯೋಜನೆಯ ಬಗ್ಗೆ ಅಪಾರವಾದ ಇಚ್ಛಾಶಕ್ತಿಯನ್ನು ವಹಿಸಿದ್ದರು. ಈ ಯೋಜನೆಯನ್ನು ಮಂಜೂರು ಮಾಡಿಸಲೇಬೇಕು ಎಂದು 2008 ರಿಂದಲೂ ಪಣತೊಟ್ಟಿದ್ದರು. ಅದರಂತೆ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡವನ್ನು ತಂದಿದ್ದರು. ಸಚಿವ ಸಂಪುಟ ಸಭೆಯಲ್ಲಿ ಯೋಜನೆಯನ್ನು ೋಷಣೆ ಮಾಡಿದ್ದು, ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಪ್ರಾರಂಭವಾಗಿ ನಗರದ ನೀರಿನ ಬವಣೆ ನೀಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.
162 ಕಿ.ಮೀ ವಿತರಣಾ ಜಾಲ:
ಈಗಾಗಲೇ ಟಿ.ನರಸೀಪುರ ಪಟ್ಟಣದ ಬಳಿ ಕಬಿನಿ ನದಿಮೂಲವಾಗಿ ನೀರು ಸರಬರಾಜು ಮಾಡುವ ಯೋಜನೆ 2025 ರ ಅಂತ್ಯಕ್ಕೆ ಅಂತಿಮವಾಗಿದ್ದು, ಹಳೆಯ ವಿತರಣಾ ಜಾಲವನ್ನು ಉಳಿಸಿಕೊಳ್ಳಲಾಗಿದೆ. ಅಮೃತ್ 2.0 ಯೋಜನೆಯಡಿ ಹಾಲಿ ಇರುವ 15 ಎಂಎಲ್‌ಡಿ ಶುದ್ಧೀಕರಣ ಘಟಕವನ್ನು ಅಭಿವೃದ್ಧಿಪಡಿಸಲು 162.20 ಕಿ.ಮೀ ವಿತರಣಾ ಜಾಲ ಹಾಗೂ 15,568 ಗೃಹಸಂಪರ್ಕವನ್ನು ಅಳವಡಿಸಲು ಯೋಜಿಸಲಾಗಿದೆ. ಈ ಕಾಮಗಾರಿಯನ್ನು 2025 ರ ಅಂತ್ಯಕ್ಕೆ ಅನುಷ್ಠಾನಗೊಳಿಸಲಾಗುತ್ತದೆ.
ಒಳಚರಂಡಿಗೆ 138 ಕೋಟಿ ರೂ,:
ಕುಡಿಯುವ ನೀರಿನ ಯೋಜನೆಯಂತೆ ಚಾಮರಾಜನಗರಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಅಂದಾಜು 138 ಕೋಟಿ ರೂ, ಯೋಜನೆಗೂ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಜಿಲ್ಲಾ ಕೇಂದ್ರದಲ್ಲಿ 2018 ರಲ್ಲಿ 1 ನೇ ಹಂತದ ಒಳಚರಂಡಿ ಯೋಜನೆಯಡಿ ಶೇ.30 ರಷ್ಟು ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದರಲ್ಲಿ 104 ಕಿ.ಮೀ ಉದ್ದದ ಒಳಚರಂಡಿ ಜಾಲವನ್ನು ಅಳವಡಿಕೆ ಮಾಡಿ 9 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಚಾಲನೆಗೊಳಿಸಲಾಗಿತ್ತು. ಆದರೆ ನಗರಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಮತ್ತು ಬಿಟ್ಟು ಹೋಗಿರುವ ಪ್ರದೇಶಗಳಲ್ಲಿ ಕೊಳಚೆ ನೀರಿನಿಂದ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ ಹಲವಾರು ಸಭೆಗಳಲ್ಲೂ ಸಾಕಷ್ಟು ಚರ್ಚೆಗಳಾಗಿತ್ತು. ಅದರಂತೆ ಸಚಿವ ಸಂಪುಟದಲ್ಲಿ 2ನೇ ಹಂತದ ಒಳಚರಂಡಿ ಯೋಜನೆಗೆ ಬಲನೀಡಲಾಗಿತ್ತು. ಪ್ರಸ್ತುತ 138 ಕೋಟಿ ರೂ, ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಜಿಲ್ಲಾ ಕೇಂದ್ರಕ್ಕೆ ಮಾಲಂಗಿಯ ಸಮೀಪದ ಕಾವೇರಿ ನದಿ ಮೂಲದಿಂದ ಕುಡಿಯುವ ನೀರು ತರುವ ಯೋಜನೆಗೆ 2008 ರಿಂದಲೂ ಶ್ರಮವಹಿಸಿದ್ದೆ. ಈ ಯೋಜನೆಯ ಜೊತೆಗೆ 2ನೇ ಹಂತದ ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ