

ಅರಕಲಗೂಡು: ಪಟ್ಟಣದ ಕುಡಿಯುವ ನೀರಿನ ಯೋಜನೆಯನ್ನು ಮೇಲ್ದರ್ಜೆಗೆ ಏರಿಸುವ ಅಮೃತ್ ಯೋಜನೆಗೆ ಶಾಸಕ ಎ. ಮಂಜು ಶನಿವಾರ ಚಾಲನೆ ನೀಡಿದರು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ 22.46 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಜಲ ಒದಗಿಸಲು ಯತ್ನಿಸಲಾಗುವುದು ಎಂದರು. ಕಾಮಗಾರಿಯಲ್ಲಿ ನೀರಿನ ಕೊಳವೆಗಳನ್ನು ಅಳವಡಿಸಿ ನಲ್ಲಿಗಳಿಗೆ ಮೀಟರ್ ಹಾಕಿ, ದಿನದ 24ಗಂಟೆಯೂ
ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಅರಕಲಗೂಡು ಪಟ್ಟಣಕ್ಕೆ ಪ್ರಸ್ತುತ 3 ಎಂಎಲ್ ಡಿ ನೀರು ಸರಬರಾಜು ಆಗುತ್ತಿದೆ. ಮುಂದಿನ ದಿನಗಳಲ್ಲಿ 4 ಎಂಎಲ್ ಡಿ ನೀರು ದೊರಕಲಿದೆ. ಮುಂದಿನ 25 ವರ್ಷಗಳ ಅಭಿವೃದ್ಧಿ ಗುರಿ ಇಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ
ಎಂದರು. ಕೇಂದ್ರ ಸರ್ಕಾರ ಶೇ. 50, ರಾಜ್ಯ ಸರ್ಕಾರ ಶೇ. 40 ಹಾಗೂ ಪಪಂ ಶೇ.10 ರಷ್ಟು ಯೋಜನಾ ವೆಚ್ಚವನ್ನು ಭರಿಸಲಿವೆ. ಜನರ ಆರೋಗ್ಯ ಕಾಪಾಡಲು ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಯೋಜನೆಯ ಮಹತ್ವದ ಉದ್ದೇಶ ಎಂದರು.