

ಜೊಯಿಡಾ: ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಿಗೆ ಕೋವಿಡ್-19 ನೆಪ ಹೇಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಜನರಿಗೆ ಸೇವೆ ನೀಡುವಾಗ ವಿಶಾಲ ಮನೊಭಾವ ಹೊಂದಿರಬೇಕು. ಬಡವರ ಮತ್ತು ರೈತರ ಕೆಲಸವನ್ನು ಆದಷ್ಟು ಬೇಗ ಮಾಡಿಕೊಡಬೇಕು ಎಂದು ತಿಳಿಸಿದರು.
ಬಾಜಾರ ಕುಣಂಗ ಗ್ರಾಪಂ ಉಪಾಧ್ಯಕ್ಷ ಅಜೀತ ಮೀರಾಶಿ ಮಾತನಾಡಿ, ಸುಲಾವಳಿ ಗ್ರಾಮಕ್ಕೆ ವಿದ್ಯುತ್ ಕೇಬಲ್ ಹಾಕಲಾಗಿದ್ದು, ಸಂಪರ್ಕ ನೀಡಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಅಭಿವೃದ್ಧಿ ಕಾಮಗಾರಿಗೂ ತಡೆ ಒಡ್ಡುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
‘ದೇಶಕ್ಕಾಗಿ ಮನೆ, ಆಸ್ತಿಯನ್ನು ತ್ಯಾಗ ಮಾಡಿದ ಹಲವಾರು ಕುಟುಂಬಗಳು ತಾಲೂಕಿನಲ್ಲಿವೆ. ಸುಪಾ ಮುಳುಗಡೆಯಾಗಿ 35 ವರ್ಷ ಆದರೂ ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ಅಲ್ಲದೆ, ಸೂಕ್ತ ವಿದ್ಯುತ್ ಸೌಲಭ್ಯ ಇಲ್ಲ. ನೆಲದಲ್ಲಿ ಕೇಬಲ್ ಅಳವಡಿಸಿದೆರೆ ನಿಮಗೇನು ತೊಂದರೆ ಎಂದು ಅಣಶಿ ಎಸಿಎಫ್ ಶಿವಾನಂದ ತೊಡ್ಕರ ಅವರನ್ನು ಸಚಿವರು ತರಾಟೆ ತೆಗೆದುಕೊಂಡರು.
ಕೋವಿಡ್-19 ಬಗ್ಗೆ ಆರೋಗ್ಯ ಇಲಾಖೆಯ ಸುಜಾತಾ ಉಕ್ಕಲಿ ಮಾಹಿತಿ ನೀಡಿದರು. ಮಾಜಿ ಶಾಸಕ ಸುನೀಲ ಹೆಗಡೆ, ಜಿ.ಪಂ. ಸದಸ್ಯ ರಮೇಶ ನಾಯ್ಕ, ಮುಖಂಡ ಸಂತೋಷ ರೇಡ್ಕರ, ಮಂಗೇಶ ದೇಶಪಾಂಡೆ, ಇಒ ಆನಂದ ಬಡಕುಂದ್ರಿ, ತಾ.ಪಂ. ಸದಸ್ಯ ಶರಧಚ್ಚಂದ್ರ ಗುರ್ಜರ್, ತಹಸಿಲ್ದಾರ್ ಸಂಜಯ ಕಾಂಬಳೆ ಇದ್ದರು.