ಕುಡಿಯುವ ನೀರಿಗೆ ಸಮಸ್ಯೆ:ಅಧಿಕಾರಿಗಳೊಂದಿಗೆ ಶಾಸಕರ ಸಭೆ

ಕುಡಿಯುವ ನೀರಿಗೆ ಸಮಸ್ಯೆ:ಅಧಿಕಾರಿಗಳೊಂದಿಗೆ ಶಾಸಕರ ಸಭೆ
Published on

ಹಾಸನ: ಬೇಸಿಗೆ ಆರಂಭವಾಗುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತವಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಪಿ.ಸ್ವರೂಪ್ ತಿಳಿಸಿದರು.
ನಗರದ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಕಚೇರಿಯಲ್ಲಿ ಗುರುವಾರ ನಗರಸಭೆ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ, ಸೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡಿದ ಅವರು,ನಗರ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿಗೆ ಎದುರಾಗಿರುವ ಸಮಸ್ಯೆ ನಿವಾರಣೆಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು
ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗವುದನ್ನು ತಡೆಯುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ, ನನ್ನ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹಾಸನ ಕ್ಷೇತ್ರಕ್ಕರ 60 ಲಕ್ಷರೂ. ಅನುದಾನ ಬಂದಿದೆ. ಇದರಲ್ಲಿ ಕೊಳವೆಬಾವಿ ಕೊರೆಸಲು ಮತ್ತು ಪೈಪ್ ಲೈನ್ ಅಳವಡಿಕೆಗೆ ಅವಕಾಶ ಇಲ್ಲದಿರುವುದರಿಂದ ಅನುಮತಿ ನೀಡಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಈ ಬಗ್ಗೆ ಮುಂಬರುವ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿ ಒತ್ತಾಯಿಸಿಲಾಗುವುದು. ಖಾಸಗಿ ಬೋರ್ವೆಲ್‌ಗಳನ್ನು ಬಾಡಿಗೆಗೆ ಪಡೆಯುವಂತೆ ತಿಳಿಸಿದ್ದು, ಯಾರು ಕೂಡ ಬಾಡಿಗೆಗೆ ನೀಡಲು ಸಿದ್ಧರಿಲ್ಲ ಎಂದರು.
ಕ್ಷೇತ್ರದ 26-28 ಗ್ರಾಮಗಳು ಮತ್ತು ನಗರ ಕೆಲ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಅಗತ್ಯ ಇರುವ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗವುದು. ಇದಕ್ಕಾಗಿ ನೀರಿನ ಟ್ಯಾಂಕರ್‌ಗಳನ್ನು ಖರೀದಿ ಮಾಡುವ ಬದಲು, 25 ಸಾವಿರ ಲೀಟರ್ ಸಂಗ್ರಹದ ಸಾಮರ್ಥ್ಯ ಹೊಂದಿರುವ ಹಾಲಿನ ಟ್ಯಾಂಕರ್‌ಗಳನ್ನು ಖರೀದಿ ಮಾಡಲು ಜಿಲ್ಲಾಧಿಕಾರಿಗೆ ಸಲಹೆ ನೀಡಿದ್ದೇನೆ. ಆ ಟ್ಯಾಂಕರ್‌ಗಳಿಂದ ಸುಲಭವಾಗಿ ಗೊರೂರು ಜಲಾಶಯದಿಂದ ನೀರು ತಂದು ಅಗತ್ಯ ಇರುವ ಕಡೆಗಳಿಗೆ ಸರಬರಾಜು ಮಾಡಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಒಳಚರಂಡಿ ಮತ್ತು ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದೇವೆ. ಒತ್ತುವರಿ ಮಾಡುವುದು ನಮ್ಮ ಮನೆಗೆ ನಾವೇ ಕುತ್ತು ಕಂತುಕೊಂಡಂತೆ ಆದ್ದರಿಂದ ಸಾರ್ವಜನಿಕರು ಒತ್ತುವರಿ ಮಾಡಬಾರದು. ಇದರಿಂದ ನೀರು ಹರಿಯಲು ತೊಂದರೆಯಾಗುವುದ ಜೊತೆಗೆ ಇತರರಿಗೂ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವಂತೆ ನಗರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net