

ರೋಣ: ಜಲಜೀವನ ಮಿಷನ್ ಯೋಜನೆಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಂದಾಜು ಮೂರು ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಗ್ರಾಮೀಣ ಪ್ರದೇಶದ ಜನರ ಮನೆಗೆ ನೀರು ಪೂರೈಸುವ ಯೋಜನೆ ಇದಾಗಿದ್ದು, ಈ ಯೋಜನೆಯಡಿ ನಡೆಯುವ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ ಮಿಷನ್ ಯೋಜನೆಯಡಿ ತಾಲೂಕಿನ ಬಳಗೋಡ ಗ್ರಾಮದಲ್ಲಿ 38.55 ಲಕ್ಷ ರೂ, ತಳ್ಳಿಹಾಳ ಗ್ರಾಮದಲ್ಲಿ 21 ಲಕ್ಷ ರೂ., ನೈನಾಪೂರ ಗ್ರಾಮದಲ್ಲಿ 40 ಲಕ್ಷ ರೂ. ಕಾಮಗಾರಿ ಹಾಗೂ ಎಚ್.ಡಿ.ಸಿ ಯೋಜನೆಯಡಿ ತಳ್ಳಿಹಾಳ ಗ್ರಾಮದಲ್ಲಿ 23 ಲಕ್ಷ ರೂ., ಮುಗಳಿ ಗ್ರಾಮದಲ್ಲಿ 88 ಲಕ್ಷ
ರೂ. ವೆಚ್ಚದ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಕೊತಬಾಳ ಗ್ರಾಪಂ ಅಧ್ಯಕ್ಷ ವೀರಣ್ಣ ಯಾಳಗಿ, ಹಿರೇಹಾಳ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಗಣಾಚಾರಿ, ತಾಪಂ ಉಪಾಧ್ಯಕ್ಷ ಇಂದ್ರಾ ತೇಲಿ, ಸಿಪಿಐ ಸುನೀಲ ಸೌದಿ ಇತರರಿದ್ದರು.