

ಹಾಸನ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ಸುಪ್ರಿಂಕೋರ್ಟಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾಶಯದಲ್ಲಿ ನೀರು ಕಡಿಮೆ ಇದ್ದರೂ ಅಧಿಕಾರಿಗಳು ತಮಿಳುನಾಡಿಗೆ ನೀರು ಹರಿಸಿದರು. ಇದರಿಂದ ಹಾಸನ ನಗರಕ್ಕೆ ಮುಂದಿನ ದಿನದಲ್ಲಿ ಕುಡಿಯುಯು ನೀರಿಗೆ ತೊಂದರೆ ಆಗಲಿದೆ. ಆದ್ದರಿಂದ ನಗರಸಭೆಯ ಇಂಜಿನಿಯರ್‌ನನ್ನು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ನಗರಕ್ಕೆ ಹೇಮಾವತಿಯಿಂದ ಕುಡಿಯುವ ನೀರು ಇಲ್ಲದಂತಾಗಿರುವುದು ದುರದೃಷ್ಟಕರ. ನಗರಸಭೆಯು ಮುಂದಿನ ದಿನಗಳಲ್ಲಿ ನಗರಪಾಲಿಕೆಯಾಗಿ ಮೇಲ್ದರ್ಜೆಗೇರಲಿದೆ. ಆಗ ಎಲ್ಲಾ ಭಾಗಗಳ ಜನರಿಗೆ ಕುಡಿಯಲು ಹೇಮಾವತಿ ನೀರು ಲಭ್ಯವಾಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜಿಲ್ಲೆಯ ಬಗ್ಗೆ ನಿರ್ಲಕ್ಷೃ ತಳೆದಿದ್ದಾರೆ. ಅವರು ಜಿಲ್ಲೆಗೆ ಬಂದು ಈಗಾಗಲೇ ಒಂದೂವರೆ ತಿಂಗಳುಗಳೇ ಕಳೆದಿವೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ನಗರಕ್ಕೆ ಕುಡಿಯುವ ನೀರನ್ನು ಸಮರ್ಪಕವಾಗಿ ಬಿಡುವಂತೆ ಸರಕಾರ, ಸಚಿವರು, ಜಿಲ್ಲಾಡಳಿತಕ್ಕೂ ಕೂಡ ಮನವಿ ಮಾಡುತ್ತೇನೆ. ಹೇಮಾವತಿ ನೀರನ್ನು ಮೊದಲು ಹಾಸನಕ್ಕೆ ನೀಡಿ. ತಮಿಳುನಾಡಿಗೆ ಇದೆ ರೀತಿ ನೀರು ಬಿಡುತ್ತಿದ್ದರೆ ಜನವರಿ, ಫೆಬ್ರವರಿ ವೇಳೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನದಲ್ಲೂ ತೀವ್ರ ಬರ
ಬರಪೀಡಿತ ತಾಲೂಕು ಪಟ್ಟಿಯಲ್ಲಿ ಜಲ್ಲೆಯಲ್ಲಿ ಅರಕಲಗೂಡು ತಾಲೂಕನ್ನು ಮಾತ್ರ ಘೋಷಣೆ ಮಾಡಲಾಗಿದೆ. ಹಾಸನ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆ ಇಲ್ಲದೇ ಬರದ ಪರಿಸ್ಥಿತಿ ವ್ಯಾಪಕವಾಗಿದೆ. ರೈತರು ಆಲೂಗೆಡ್ಡೆ ಬೆಳೆಯನ್ನೇ ಮರೆಯುವ ಪರಿಸ್ಥಿತಿಗೆ ಬಂದಿದ್ದಾರೆ. ಇವೆಲ್ಲಾ ಗಮನಿಸಿದರೆ ಜಿಲ್ಲೆಯನ್ನು ಎಲ್ಲಾ ರೀತಿಯಲ್ಲೂ ನಿರ್ಲಕ್ಷ ಮಾಡಲಾಗಿದೆ ಎಂದು ದೂರಿದರು.
ಜೆಡಿಎಸ್ ಸರಕಾರದ ಸಮಯದಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ತರಲಾಗಿತ್ತು. ಆದರೆ ಕಾರಣಾಂತರದಿಂದ ಹಿಂದಿನ ಅವಧಿಯಲ್ಲಿ ಆ ಹಣವನ್ನು ಹಲವಾರು ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲಾಗಿದೆ. ಈಗ ನಗರದ ಚನ್ನಪಟ್ಟಣ ಕೆರೆಯಲ್ಲಿ ನೀರು ಇಲ್ಲದೆ ಬತ್ತಿ ಹೋಗಿದೆ. ಇದರ ಮಧ್ಯೆ ಒಂದು ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಹಲವಾರು ವರ್ಷಗಳಿಂದ ಅದು ಪಾಳುಬಿದ್ದಿದೆ. ಹಾಸನಾಂಬ ದೇವಸ್ಥಾನದ ಬಾಗಿಲು ತೆಗೆಯುವ ಮೊದಲೇ ಜಿಲ್ಲೆಯ ಪ್ರವಾಸಿ ತಾಣ ಉದ್ಘಾಟನೆ ಆಗಬೇಕಾಗಿತ್ತು. ಆದರೆ ಆಗಿಲ್ಲ. ಮುಂದಿನ ವರ್ಷದ ಈ ವೇಳೆಗೆ ಟೂರಿಸಂ ಹಬ್ ಮಾಡಲಾಗುವುದು ಎಂದರು.
ಪಕ್ಷದ ಮೈತ್ರಿ ವಿಚಾರ ವರಿಷ್ಠರಿಗೆ ಬಿಟ್ಟ ವಿಚಾರ. ಈ ಬಗ್ಗೆ ಪ್ರಸ್ತಾಪ ಮಾಡಲು ಹೋಗುವುದಿಲ್ಲ. ದೇವೇಗೌಡರು, ಕುಮಾರಣ್ಣ, ರೇವಣ್ಣನವರು ಯಾವ ತೀರ್ಮಾನ ಮಾಡುತ್ತಾರೆ ಅದಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ. ಪಕ್ಷದಲ್ಲಿ ನಾನು ಶಿಸ್ತಿನ ಸಿಪಾಯಿ. ಹಿರಿಯರು ತೆಗೆದುಕೊಳ್ಳುವ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.