

ಮೈಸೂರು: ಮುಂಗಾರು ವಿಳಂಬವಾಗಿರುವುದರಿಂದ ರಾಜ್ಯ ಸರ್ಕಾರ ಕೃಷಿಗಿಂತ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು ಎಂದು ಸಂಸದ ಪ್ರತಾಪ್‌ಸಿಂಹ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಈಗ ಸಕಾಲಕ್ಕೆ ಮಳೆ ಆಗದೆ ತೊಂದರೆ ಆಗುತ್ತಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 80 ಅಡಿಗೆ ಕುಸಿದಿದೆ. ಮಳೆ ಬರುವುದು ತಡವಾದರೆ ಮೈಸೂರು, ಬೆಂಗಳೂರು ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ಆದ್ದರಿಂದ ಕೃಷಿಗಿಂತಲೂ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು ಎಂದರು.
ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿ ತಂಬಾಕು ನಾಟಿ ಮಾಡಿದ್ದಾರೆ. ಈಗ ಮಳೆ ಅವಶ್ಯಕತೆ ಇತ್ತು. ಚಂಡಮಾರುತ ವಾತಾವರಣ ಇದೆ. ಆದಷ್ಟು ಬೇಗ ಮುಂಗಾರು ಆರಂಭವಾದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಮೇಕೆದಾಟು ಯೋಜನೆ ಜಾರಿಗೊಳಿಸಲಿ: ವಿರೋಧ ಪಕ್ಷದಲ್ಲಿದ್ದಾಗ ಮೇಕೆದಾಟು ಯೋಜನೆಗೆ ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕರು, ಈಗ ತಮ್ಮ ಸರ್ಕಾರವೇ ಇರುವುದರಿಂದ ಯೋಜನೆ ಜಾರಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.
2002ರಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, 2012ರಲ್ಲಿ ಬಿಜೆಪಿ ಸರ್ಕಾರ ಕುಡಿಯುವ ನೀರು ಯೋಜನೆ ಮಾಡಿದರೆ ತಕಾರರು ಬರುತ್ತದೆಂದು ಜಲವಿದ್ಯುತ್ ಉತ್ಪಾದನೆಗೆ ಪರಿವರ್ತನೆ ಮಾಡಿತು. ಡಿಪಿಆರ್ ಸಿದ್ಧಪಡಿಸಲು ಅರಣ್ಯ ಇಲಾಖೆ ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ. ಮೇಕೆದಾಟು ಯೋಜನೆ ಡಿಸಿಎಂ ಡಿ.ಕೆ.ಶಿವಕುಮಾರ್ ತವರು ನೆಲದಲ್ಲಿರುವುದರಿಂದ ಶೀಘ್ರ ಕಾರ್ಯಪ್ರವೃತ್ತರಾಗಲಿ ಎಂದರು.
ಮುಂದಿನ ತಿಂಗಳ ಬಜೆಟ್ ಅಧಿವೇಶನಕ್ಕೂ ಮುನ್ನವೇ ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಂಬಂಧ ಪಕ್ಷದ ಒಳಗಡೆ ಚರ್ಚೆ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.