

ಮೂಡಲಗಿ: ಅರಬಾವಿ, ಕಲ್ಲೋಳಿ, ನಾಗನೂರ ಮತ್ತು ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ 143 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಪಪಂ ಹಾಗೂ ಸಾರ್ವಜನಿಕರಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಮೃತ-2 ಯೋಜನೆಯಡಿ ಈ ಅನುದಾನ ಬಿಡುಗಡೆಯಾಗಿದೆ ಎಂದರು.
ಅರಬಾವಿ, ಕಲ್ಲೋಳಿ, ನಾಗನೂರ ಪಟ್ಟಣಗಳಿಗೆ ತಲಾ 2,000 ಮತ್ತು ಮೂಡಲಗಿ ಪುರಸಭೆ ವ್ಯಾಪ್ತಿಯ 5,800 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ತಲುಪಲಿದೆ. ಧುಪದಾಳ ಹತ್ತಿರ ಶುದ್ಧ ಕುಡಿಯುವ ನೀರಿಗಾಗಿ ಒಎಚ್‌ಟಿ ನಿರ್ಮಾಣವಾಗಲಿದ್ದು, ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ನಮ್ಮ ಬಿಜೆಪಿ ಸರ್ಕಾರದಿಂದ ಮಂಜೂರಾದ ಕಾಮಗಾರಿ ಎಂದರು.
ಕಲ್ಲೋಳಿ ಪಪಂ ಎದುರು ನಿರ್ಮಿಸಲಾಗಿರುವ ಶೂರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಸಮಾರಂಭವನ್ನು ಇಷ್ಟರಲ್ಲಿಯೇ ಉದ್ಘಾಟಿಸಲಾಗುವುದು ಎಂದರು. ಪರಪ್ಪ ಕಡಾಡಿ, ಬಸವಂತ ದಾಸನವರ, ನೀಲಕಂಠ ಕಪ್ಪಲಗುದ್ದಿ, ಸುಭಾಷ ಕುರಬೇಟ, ವಸಂತ ತಹಸೀಲ್ದಾರ್, ಮಹಾಂತೇಶ ಕಪ್ಪಲಗುದ್ದಿ, ಮಲ್ಲಪ್ಪ ಹೆಬ್ಬಾಳ, ಉಮೇಶ ಬೂದಿಹಾಳ, ಬಸು ಯಾದಗೂಡ, ದತ್ತು ಕಲಾಲ, ಭೀಮಶಿ ಗೋರೋಶಿ, ಮಹಾದೇವ ಮದಭಾವಿ ಇದ್ದರು.