ಕುಡಿಯುವ ನೀರನ ಸಂಪರ್ಕ ಅವೈಜ್ಞಾನಿಕ

Published on

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ 23ನೇ ವಾರ್ಡ್ ವ್ಯಾಪ್ತಿಯ 24*7ರ ಕುಡಿಯುವ ನೀರಿನ ಸಂಪರ್ಕವನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಹಾಗೂ ಕಾರ್ಯ ನಿರ್ವಹಣೆ ಕಳೆಪಯಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸರಿಯಾಗಿ ದುರಸ್ತಿ ಪಡಿಸಬೇಕೆಂದು ನಗರಸಭೆ ಪೌರಾಯುಕ್ತ ರಮೇಶ್ ಅವರಿಗೆ ಸದಸ್ಯೆ ಜಯಮೇರಿ ಮಂಗಳವಾರ ದೂರು ನೀಡಿದ್ದಾರೆ.

ಕುಡಿಯುವ ನೀರಿನ ಸಂಪರ್ಕವನ್ನು ಶೇ.90ರಷ್ಟು ಭಾಗ ಶೌಚಗೃಹದ ಬಳಿ ಹಾಗೂ ಚರಂಡಿಗೆ ಸೇರಿದಂತೆ ನಲ್ಲಿಗಳನ್ನು ಆಳವಡಿಸಲಾಗಿದೆ. ಇದು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಾಗಿದೆ. ಈ ಬಗ್ಗೆ ಕುಡಿಯುವ ನೀರಿನ ಯೋಜನೆ ಇಂಜಿನಿಯರ್ ಎಂ.ರಮೇಶ್, ಕಾರ್ತಿಕ್ ಗೌಡ ಹಾಗೂ ನಗರಸಭೆ ಇಂಜಿನಿಯರ್ ಲಕ್ಷ್ಮೀ ಹಾಗೂ ಎಇಇ ಸುರೇಶ್ ಅವರಿಗೆ ತಿಳಿಸಿದ್ದರೂ ದುರಸ್ತಿ ಪಡಿಸಿಲ್ಲ ಎಂದು ಜಯಮೇರಿ ಆರೋಪಿಸಿದರು.

ವಾರ್ಡ್ ಸದಸ್ಯರು ತಿಳಿಸಿರುವ ನ್ಯೂನತೆಗಳನ್ನು ಪರಿಶೀಲಿಸಿ, ಮುರಿದ ನಲ್ಲಿ ಹಾಗೂ ವಾಲ್ವ್ ದುರಸ್ತಿ, ಪೈಪ್‌ಲೈನ್ ಲೀಕೇಜ್ ಮತ್ತು ನೀರಿನ ಒತ್ತಡ ಕಡಿಮೆ ಇರುವ ಹಾಗೂ ಆಗದಿರುವ ಕಾಂಕ್ರೀಟ್ ರಸ್ತೆಗಳನ್ನು ಸರಿಪಡಿಸುವ ಇತ್ಯಾದಿ ನ್ಯೂನತೆಗಳನ್ನು ಒಂದು ತಿಂಗಳಿನಲ್ಲಿ ಗುತ್ತಿಗೆದಾರರಿಗೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಆದರೆ ಗುತ್ತಿಗೆದಾರ ಯಾವುದನ್ನೂ ಸರಿಪಡಿಸಿಲ್ಲ ಎಂದು ಕಿಡಿಕಾರಿದರು.

ಕುಡಿಯುವ ನೀರು ಪೂರೈಕೆ ಮಾಡುವ ನೌಕರರಿಗೆ ನಗರಸಭೆಯಿಂದ 18,000 ರೂ. ಸಂಬಳ ಕೊಡಬೇಕು. ಆದರೆ 10 ರಿಂದ 11 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ನಲ್ಲಿ ಸಂಪರ್ಕಕ್ಕೆ ಗುತ್ತಿಗೆದಾರನಿಗೆ ನಗರಸಭೆಯು ಪಾವತಿ ಮಾಡುತ್ತಿರುವ ಹಣ ಒಂದು ರೀತಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಕ್ರಮವಾಗಿದೆ. ಈ ಟೆಂಡರ್‌ದಾರರ ವಿರುದ್ಧ ತನಿಖೆ ನಡೆಸಬೇಕು. ನಲ್ಲಿ ಸಂಪರ್ಕದ ಅವಾಂತರಗಳನ್ನು ಗುತ್ತಿಗೆದಾರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net