ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ

ಸುನೀಲ್
Published on

ಸಕಲೇಶಪುರ: ತಾಲೂಕಿನ ವನಗೂರು ಕೂಡಿಗೆಯಲ್ಲಿ ಭಾನುವಾರ ಕುಡಿದ ಮತ್ತಿನಲ್ಲಿದ್ದ ಯುವಕರಿಬ್ಬರು ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನನ್ನೇ ಹತ್ಯೆ ಮಾಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಮೀಪದ ಬ್ಯಾಗಡಹಳ್ಳಿ ಗ್ರಾಮದ ಸುನೀಲ್(28) ಹತ್ಯೆಯಾದವನು. ಇದೇ ಗ್ರಾಮದ ಸತೀಶ್, ಚಂದನ್ ಬಂಧಿತ ಆರೋಪಿಗಳು. ಭಾನುವಾರ ಮುಂಜಾನೆ ವನಗೂರು ಗ್ರಾಮದ ಲಿಕ್ಕರ್ ಶಾಪ್‌ನಲ್ಲಿ ಮದ್ಯ ಖರೀದಿಸಿ ಸಮೀಪದ ಅರಣ್ಯಕ್ಕೆ ತೆರಳಿದ್ದಾರೆ. ಮದ್ಯ ಸೇವಿಸುವಾಗ ಮಾತಿಗೆ ಮಾತು ಬೆಳೆದು ಮೊದಲಿಗೆ ಸುನೀಲ್ ತಲೆಗೆ ಜತೆಗಿದ್ದ ಸತೀಶ್ ಹಾಗೂ ಚಂದನ್ ಬಿಯರ್ ಬಾಟಲಿಯಿಂದ ಒಡೆದಿದ್ದಾರೆ. ಕುಸಿದು ಬಿದ್ದ ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ. ರಾತ್ರಿ ಕಳೆದರೂ ಮನೆಗೆ ಬಾರದ ಮಗನ ಬಗ್ಗೆ ತಾಯಿಯು ಹುಡುಕಾಟ ನಡೆಸಿದಾಗ ಸುನೀಲ್ ಮೃತದೇಹ ಪತ್ತೆಯಾಗಿದೆ. ಬಳಿಕ ಯಸಳೂರು ಠಾಣೆಗೆ ದೂರು ನೀಡಿದರು. ಕಾರ್ಯಾಚರಣೆಗಿಳಿದ ಪೊಲೀಸರು ಗ್ರಾಮದ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net