

ಬೆಂಗಳೂರು: ಮದ್ಯದ ನಶೆಯಲ್ಲಿದ್ದ ಯುವತಿಯೊಬ್ಬಳು ಶನಿವಾರ ರಾತ್ರಿ ಚರ್ಚ್‌ಸ್ಟ್ರೀಟ್‌ನಲ್ಲಿ ಸಾರ್ವಜನಿಕರು ಹಾಗೂ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ರಂಪಾಟ ಮಾಡಿದ್ದು, ಘಟನೆಯ ದೃಶ್ಯಾವಳಿ ವೈರಲ್ ಆಗಿದೆ.
ದ್ವಿಚಕ್ರ ವಾಹನದಲ್ಲಿ ರಾತ್ರಿ ಚರ್ಚಸ್ಟ್ರೀಟ್‌ನ ಪಬ್ಗೆ ಬಂದಿದ್ದ ಯುವತಿಯು ಕಂಠಪೂರ್ತಿ ಮದ್ಯ ಸೇವಿಸಿದ್ದಳು. ಬಳಿಕ ಪಬ್ನಿಂದ ಹೊರ ಬಂದ ಯುವತಿಯು ನಶೆಯಲ್ಲಿ ರಸ್ತೆಯುದ್ದಕ್ಕೂ ತೂರಾಡುತ್ತಾ ದಾರಿಹೋಕರಿಗೆ ಮನಸೋಇಚ್ಛೆ ನಿಂದಿಸಿದ್ದಾಳೆ. ಅಲ್ಲದೆ, ಬುದ್ಧಿ ಮಾತು ಹೇಳಲು ಹೋದ ಸಾರ್ವಜನಿಕರ ಮೇಲೆಯೇ ಮುಗಿಬಿದ್ದಿದ್ದಾಳೆ. ಆಗ ಚರ್ಚ್ ಸ್ಟ್ರೀಟ್‌ನಲ್ಲಿ ಗಸ್ತಿನಲ್ಲಿದ್ದ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಯುವತಿಯನ್ನು ಸಂಭಾಳಿಸಲು ಯತ್ನಿಸಿದ್ದಾರೆ. ಆದರೆ, ಪೊಲೀಸರ ವಿರುದ್ಧವೇ ತಿರುಗಿಬಿದ್ದ ಯುವತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೇ, ಪೊಲೀಸರನ್ನೇ ತಳ್ಳಿ ದುಂಡಾವರ್ತಿ ತೋರಿದ್ದಾಳೆ.
ಹೈರಾಣಾದ ಪೊಲೀಸರು:
ಪೊಲೀಸರು ಯುವತಿಯ ಮನವೊಲಿಸಿ ಆಟೋದಲ್ಲಿ ಮನೆಗೆ ಕಳುಹಿಸಲು ಯತ್ನಿಸಿದ್ದಾರೆ. ಆದರೆ, ಯುವತಿ ಆಟೋ ಹತ್ತಲು ನಿರಾಕರಿಸಿ ರಂಪಾಟ ಮಾಡಿದ್ದಾಳೆ. ಮಹಿಳಾ ಪೊಲೀಸ್ ಸಿಬ್ಬಂದಿಯಿಲ್ಲದ ಕಾರಣ ಪುರುಷ ಪೊಲೀಸ್ ಸಿಬ್ಬಂದಿಯು ಯುವತಿಯನ್ನು ಆಟೋಗೆ ಹತ್ತಿಸಲು ಹೈರಾಣಾದರು. ಅಂತಿಮವಾಗಿ ಬೇರೆ ಯುವತಿಯರ ಸಹಾಯದಿಂದ ಪಾನಮತ್ತ ಯುವತಿಯನ್ನು ಆಟೋಗೆ ಹತ್ತಿಸಿ ಮನೆಗೆ ಕಳುಹಿಸಿದರು. ಪಾನಮತ್ತ ಯುವತಿಯು ಉತ್ತರ ಭಾರತ ಮೂಲದವಳಾಗಿದ್ದು, ನಗರದ ಚಿಕ್ಕಬಾಣಾವರ ಬಳಿಯ ಮೇದರಹಳ್ಳಿ ವಾಸವಾಗಿದ್ದಾರೆ. ಅವರೊಬ್ಬಳೇ ದ್ವಿಚಕ್ರ ವಾಹನದಲ್ಲಿ ಚರ್ಚ್‌ಸ್ಟ್ರೀಟ್‌ನ ಪಬ್ಗೆ ಬಂದಿದ್ದಳು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.