ಕುಡಿದ ಅಮಲಿನಲ್ಲಿ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ ಗಂಡ

ಕುಡಿದ ಅಮಲಿನಲ್ಲಿ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ ಗಂಡ
Published on

ಹಾಸನ : ಕುಡಿದ ಅಮಲಿನಲ್ಲಿ ಗಂಡನೆ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ  ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಮೂಗುಲಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಶಾಂತಿಗ್ರಾಮ ಸಮೀಪದ ದಾಸರಹಳ್ಳಿ ನಿವಾಸಿ ವಿದ್ಯಾ (26) ಮೃತ ದುರ್ದೈವಿ. ಮೂಗುಲಿ ಉಮೇಶ್ (36) ಕೊಲೆ ಮಾಡಿದ ಆರೋಪಿ.

ವಿದ್ಯಾ ಅವರನ್ನು ಮೂಗುಲಿ ಗ್ರಾಮದ ಉಮೇಶ್ ಎಂಬಾತನಿಗೆ ಕಳೆದ ಹತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಗಾರೆ ಕೆಲಸ ಮಾಡಿಕೊಂಡಿದ್ದ ಉಮೇಶ್ ಪ್ರತಿನಿತ್ಯ ಕುಡಿದು ಬಂದು ಹೆಂಡತಿ ವಿದ್ಯಾ ಜೊತೆಗೆ ಜಗಳ ಮಾಡುತ್ತಿದ್ದ. ಆತನ ಕುಡಿತ ವಿಷಯವಾಗಿ ಮನೆಯಲ್ಲಿ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂದು ನೆರೆಯ ನಿವಾಸಿಗಳು ತಿಳಿಸಿದ್ದಾರೆ.

ಕಳೆದ 15 ದಿನಗಳ ಹಿಂದೆ ಅನಾರೋಗ್ಯದ ಕಾರಣ ವಿದ್ಯಾ ತನ್ನ ತವರು ಮನೆಯಾದ ದಾಸರಹಳ್ಳಿಗೆ ತೆರಳಿದ್ದರು. ಶನಿವಾರ ಸಂಜೆ ಗಂಡನ ಮನೆ ಮೂಗಲಿಗೆ ಬಂದಿದ್ದಳು. ಶನಿವಾರ ರಾತ್ರಿ ಗಂಡ ಉಮೇಶ್ ಕುಡಿದು ಬಂದು ಹೆಂಡತಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಅಮಲಿನಲ್ಲಿದ್ದ ಉಮೇಶ್ ಸಿಟ್ಟಿನಲ್ಲಿ ಹೆಂಡತಿ ವಿದ್ಯಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ದಂಪತಿಗೆ ಐದು ವರ್ಷದ ಹೆಣ್ಣು ಮಗುವಿದೆ.

ಘಟನೆ ಎಲ್ಲರಿಗೂ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯಾ, ಗ್ರಾಮಾಂತರ ಠಾಣಾ ಪೋಲಿಸ್ ಸಬ್‌ಇನ್ಸ್‌ಪೆಕ್ಟರ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಉಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net