

ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಯಾಘನ್ ಧಾರವಾಡಕರ್ 2ನೇ ಬಾರಿಗೆ ನೇಮಕಗೊಂಡಿದ್ದು, ಗುರುವಾರ ಬೆಳಗ್ಗೆ 10.30ಕ್ಕೆ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಬಿಜೆಪಿ ಹಿರಿಯ ಮುಖಂಡರೂ ಆದ ಧಾರವಾಡಕರ್ ಅವರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಿರಿಯ ಕಾರ್ಯಕರ್ತ ರಾಗಿದ್ದವರು. 1978ರಿಂದ ಪರಿಷತ್ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಜತೆಗೆ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಸಂಘದ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ನಗರ ಜಿಲ್ಲಾಧ್ಯಕ್ಷರಾಗಿ ಒಂದು ಬಾರಿ, ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿಗೆ ಕೆಲಸ ಮಾಡಿದ್ದಾರೆ. ಅನುಭವಿಗಳೂ ಆದ ಇವರು ಪ್ರಾಮಾಣಿಕ ಹಾಗೂ ಬೇರು ಮಟ್ಟದ ಕಾರ್ಯಕರ್ತರಾಗಿ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಶಾಸಕರೂ ಆಗಿದ್ದ ದಿ.ಚಂದ್ರಶೇಖರ ಪಾಟೀಲ್ ರೇವೂರ ಅವರ ಪರಮಾಪ್ತರೂ ಆಗಿದ್ದರು. ನಂತರದ ಅವಧಿಯಲ್ಲಿ ರೇವೂರ ಕುಟುಂಬದ ಜತೆ ಗಟ್ಟಿಯಾಗಿ ನಿಂತರು. ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಇವರ ಸೇವೆ ಗುರುತಿಸಿ ರಾಜ್ಯ ಸರ್ಕಾರ ಮತ್ತೊಂದು ಅವಧಿಗೆ ಕುಡಾ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ತಮ್ಮ ಆಪ್ತರೂ ಆಗಿರುವ ಧಾರವಾಡಕರ್ ಅವರನ್ನು ಮತ್ತೊಂದು ಅವಧಿಗೆ ನೇಮಕ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತಸ: ಕೆ.ಬಿ.ಕುಲಕರ್ಣಿ , ರವಿ ಲಾತೂರಕರ್, ಕೃಷ್ಣಾಚಾರ್ಯ ನವಲಿ, ಅರವಿಂದ ನವಲಿ, ಸುಂದರ ಕುಲಕರ್ಣಿ , ಸಮಾಜದ ಅನೇಕ ಗಣ್ಯರು, ಅಪ್ಪಾಸಾಬ್ ಪಾಟೀಲ್, ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ ಸೇರಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಧಾರವಾಡಕರ್ ನೇಮಕಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕುಡಾ ಅಧ್ಯಕ್ಷನಾಗಿ ಮತ್ತೊಂದು ಅವಧಿಗೆ ಕೆಲಸ ಮಾಡುವ ಅವಕಾಶ ದೊರೆತಿದ್ದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಶಾಸಕರೂ ಆದ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಸೇರಿ ಪಕ್ಷದ ವರಿಷ್ಠರು, ಜಿಲ್ಲೆಯ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ. ನಗರದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು.
ದಯಾಘನ್ ಧಾರವಾಡಕರ್,
ನೂತನ ಅಧ್ಯಕ್ಷ, ನಗರಾಭಿವೃದ್ದಿ ಪ್ರಾಧಿಕಾರ ಕಲಬುರಗಿ.