

ಚಿತ್ರದುರ್ಗ: ದೇಶದ ಆರ್ಥಿಕ ವ್ಯವಸ್ಥೆ ನಿರ್ವಹಿಸುವ ಸಚಿವೆ ನಿರ್ಮಲಾ ಸೀತಾರಾಮನ್‌ರಂತೆ, ಕುಟುಂಬದ ಹೊಣೆಗಾರಿಕೆ ಹೊತ್ತ ಪ್ರತಿ ಮಹಿಳೆಯೂ ಆ ಕುಟುಂಬಕ್ಕೆ ವಿತ್ತ ಮಂತ್ರಿಯಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಣ್ಣಿಸಿದರು.
ಹೊಳಲ್ಕೆರೆ ಪಟ್ಟಣದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ತಾಲೂಕು ಯೋಜನಾ ಕಚೇರಿಯ ನೂತನ ಕಟ್ಟಡ ‘ವಿಕಾಸ ಸೌಧ’ ಉದ್ಘಾಟಿಸಿ ಮಾತನಾಡಿದರು.
ಬಡವರೆಂದು ಯಾರೂ ಅಂದುಕೊಳ್ಳಬೇಡಿ. ಆರ್ಥಿಕ ಸದೃಢತೆಯೊಂದಿಗೆ ಶ್ರೀಮಂತರಾಗಲು ಪ್ರಯತ್ನಿಸಿ. ಎಲ್ಲದಕ್ಕಿಂತ ಹೃದಯ ಶ್ರೀಮಂತಿಕೆ ದೊಡ್ಡದು. ಮಹಿಳೆಯರಲ್ಲಿ ನಾಯಕತ್ವ ಗುಣ, ಕುಟುಂಬ ನಿರ್ವಹಣೆ, ಕೃಷಿ ಅಭಿವೃದ್ಧಿ, ಸಂಘದಲ್ಲಿ ಉಳಿತಾಯ ಸೇರಿ ಇನ್ನಿತರೆ ತರಬೇತಿಗಳನ್ನು ನೀಡಲಾಗುತ್ತಿದ್ದು, ಯೋಜನೆಯ 600 ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸ್ವ-ಉದ್ಯೋಗ ಕೈಗೊಳ್ಳಲು ಸಂಸ್ಥೆಯೂ ಸಾಲ ಮಾತ್ರವಲ್ಲ. ನೈಪುಣ್ಯತೆ ತುಂಬುವ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಬ್ಯಾಂಕ್‌ಗಳು ಸದ್ವಿನಿಯೋಗಕ್ಕಾಗಿ 1.25 ಲಕ್ಷ ಕೋಟಿ ಸಾಲ ನೀಡಿವೆ. ಪ್ರಾಮಾಣಿಕವಾಗಿ ಮರುಪಾವತಿಸುವ ಕೆಲಸವನ್ನು ಬಹುತೇಕ ಸ್ವ-ಸಹಾಯ ಸಂಘಗಳು ಮಾಡುತ್ತಿವೆ. ಸದಸ್ಯರನ್ನು ಫಲಾನುಭವಿ ಎನ್ನದೆಯೇ ಪ್ರಗತಿಯ ಪಾಲುದಾರರೆಂದು ಲಾಭಾಂಶ ವಿತರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರು ಚಾರಿಟೆಬಲ್ ಟ್ರಸ್ಟ್ ಮೂಲಕ ಅದರ ಲಾಭಾಂಶ ಮಹಿಳೆಯರಿಗೆ ನೀಡುತ್ತಿದ್ದಾರೆ. ಗ್ರಾಮಾಭಿವೃದ್ಧಿ ಸಂಸ್ಥೆ ದೇಗುಲಗಳ ಅಭಿವೃದ್ಧಿಗೂ ಸಹಕಾರಿಯಾಗಿದ್ದು, ಜೀರ್ಣೋದ್ಧಾರ ಆಗುತ್ತಿವೆ. ಯಾವ ಬಿರುದಿಗಾಗಿಯೂ ಕೆಲಸ ಮಾಡುವವರಲ್ಲ. ಧರ್ಮ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಮೂಹಿಕ ಕಲ್ಯಾಣ ದೇಶದಲ್ಲೇ ಮೊದಲು: ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಸಂಸ್ಥೆ ಇದಾಗಿದೆ. ಉತ್ತರ ಕರ್ನಾಟಕದಲ್ಲಿ ಮದುವೆಗಾಗಿ ಸಾಲ ಮಾಡಿದರೆ, ಜೀತಕ್ಕೆ ಇರಬೇಕಾದ ಪರಿಸ್ಥಿತಿ ಈ ಹಿಂದೆ ಇತ್ತು. ಆದರೆ, ಮೊಟ್ಟಮೊದಲ ಬಾರಿಗೆ ಸಾಮೂಹಿಕ ಕಲ್ಯಾಣ ಮಾಡಿದ ಕೀರ್ತಿ ಶ್ರೀಕ್ಷೇತ್ರದ್ದಾಗಿದ್ದು, ಅದರ ಪ್ರಯೋಜನ ಆ ಭಾಗದ ಜನ ಪಡೆಯಲಾರಂಭಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಳಲ್ಕೆರೆ ಪಾವನವಾಗಿದೆ: ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಲಕ್ಷಾಂತರ ಮಂದಿ ಬದುಕು ಕಟ್ಟಿಕೊಳ್ಳಲು ಹೆಗ್ಗಡೆ ಅವರು ನೆರವಾಗಿದ್ದಾರೆ. ಧಾರ್ಮಿಕ ಪ್ರಜ್ಞೆಯೊಂದಿಗೆ ಸಂಸ್ಕಾರ ಕಲಿಸುತ್ತಿದ್ದಾರೆ. ಇದೆಲ್ಲ ಮಂಜುನಾಥೇಶ್ವರ ಸ್ವಾಮಿಯ ಆಶೀರ್ವಾದದಿಂದ ಸಾಧ್ಯವಾಗಿದೆ. ಅವರ ಪಾದ ಸ್ಪರ್ಶದಿಂದ ಹೊಳಲ್ಕೆರೆ ಜನ ಪಾವನರಾಗಿದ್ದಾರೆ. ಕಾಯಕ ಸೇವೆಯಿಂದಾಗಿ ಬಡತನ ನಿರ್ಮೂಲನೆ ಆಗಲಿ ಎಂದು ಆಶಿಸಿದರು.
ರಾಜ್ಯದ ಸ್ವ-ಸಹಾಯ ಸಂಘದ ಕಾರ್ಯವೈಖರಿ ಮೆಚ್ಚಿ ದೇಶಾದ್ಯಂತ ಹೆಗ್ಗಡೆ ಅವರ ಮುಂದಾಳತ್ವದಲ್ಲಿ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡಿದ್ದು, ರಾಜ್ಯಸಭೆಯ ಘನತೆ ಹೆಚ್ಚಿಸಿದೆ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸರ್ಕಾರದಿಂದ ಆಗುವಂತ ಕೆಲಸಗಳನ್ನು ಧರ್ಮಾಧಿಕಾರಿಯಾಗಿ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯಾಗಿ, ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಲು, ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ ಎಂದು ಬಣ್ಣಿಸಿದರು.
ಅನ್ನದಾಸೋಹ ಭಾರತಕ್ಕೆ ಮಾದರಿ: ಧರ್ಮಸ್ಥಳ ಬಿ.ಸಿ.ಟ್ರಸ್ಟ್‌ನ ಸಿಇಒ ಎಸ್.ಎಸ್.ಅನಿಲ್‌ಕುಮಾರ್ ಮಾತನಾಡಿ, ಧಾರ್ಮಿಕ ಕಟ್ಟುಪಾಡು ಉಳಿಸಿ, ಬೆಳೆಸುವುದೇ ಬಹುದೊಡ್ಡ ಕೊಡುಗೆ. ಪೂಜ್ಯರು ಆ ನಿಟ್ಟಿನಲ್ಲಿ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ಧರ್ಮಸ್ಥಳದ ಅನ್ನದಾಸೋಹ ಭಾರತದಲ್ಲೇ ಮಾದರಿಯಾಗಿದ್ದು, ನ್ಯಾ.ಜಿಯೋಗ್ರಾಫಿಕ್‌ನಲ್ಲೂ ಪ್ರಸಾರವಾಗಿದೆ. ದೇಶದಲ್ಲಿ 3 ಕೋಟಿ ಜನರಿಗೆ ಸ್ವ-ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿಯ ಸುಮಿತ್ರಕ್ಕ, ಎಂಎಲ್ಸಿ ಕೆ.ಎಸ್.ನವೀನ್, ತಹಸೀಲ್ದಾರ್ ಫಾತಿಮಾ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ, ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿಗಳಾದ ಪ್ರಭಾಕರ್, ವಸಂತ್ ಸೇರಿ ಪುರಸಭೆಯ ಹಾಲಿ-ಮಾಜಿ ಸದಸ್ಯರಿದ್ದರು.