

ಹಾಸನ: ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಮೂರು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಮತದಾರರು ಕುಟುಂಬ ರಾಜಕಾರಣಕ್ಕೆ ಎಳ್ಳುನೀರು ಬಿಟ್ಟು ತಿಲಾಂಜಲಿ ಹಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದೇವರಾಜೆಗೌಡ ಹೇಳಿದರು.
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರ ಮನ ಗೆದ್ದಿವೆ ಎಂಬುದಕ್ಕೆ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೇ ಸಾಕ್ಷಿ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರವನ್ನು ಬೀಳಿಸಬೇಕೆಂಬ ದುರುದ್ದೇಶದಿಂದ ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ. ಇದರ ಜೊತೆ ಕುಟುಂಬ ರಾಜಕಾರಣಕ್ಕೂ ತಿಲಾಂಜಲಿ ಹಾಡಿದ್ದಾರೆ. ಕೇವಲ ಕರ್ನಾಟಕ ರಾಜ್ಯವಲ್ಲದೆ ಕೇರಳದ ವಯನಾಡು ಸೇರಿದಂತೆ ಇತರ ರಾಜ್ಯಗಳಲ್ಲೂ ಕಾಂಗ್ರೆಸ್ ಅಲೆ ಎದ್ದಿದೆ. ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳು ಜನ ಮೆಚ್ಚುಗೆಗಳಿವೆ. ವಿರೋಧ ಪಕ್ಷಗಳು ಮಾಡುತ್ತಿದ್ದ ಟೀಕೆ ಟಿಪ್ಪಣಿ ಮತಗಳಾಗಿ ಪರಿವರ್ತನೆ ಆಗಿವೆ. ಕ್ಷೇತ್ರ ಪಲ್ಲಟ ಮಾಡಿದವರಿಗೆ ಜನ ಹೇಗೆ ಬುದ್ಧಿ ಕಲಿಸುತ್ತಾರೆ ಎಂಬುದಕ್ಕೆ ಈ ಚುನಾವಣೆ ಸಾಕ್ಷಿ ಎಂದರು. ಜೆಡಿಎಸ್ ಪಕ್ಷದ ವರಿಷ್ಠರು ಈ ಚುನಾವಣೆಯಿಂದ ಬುದ್ಧಿ ಕಲಿಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದೇವಪ್ಪ ಮಲ್ಲಿಗೆವಾಳು, ಚಂದ್ರಶೇಖರ್, ರಘು ದಾಸರಕೊಪ್ಪಲು, ಅಶೋಕ್ ನಾಯಕರಹಳ್ಳಿ, ಶಿವಕುಮಾರ್ ಇತರರು ಉಪಸ್ಥಿತರಿದ್ದರು.