ಕುಟುಂಬ ನಿರ್ವಹಣೆ ಆಧಾರಸ್ತಂಭ ಮಹಿಳೆ

Mela
Published on

ಬೀದರ್: ಜವಾಬ್ದಾರಿಗಳ ಅನುಗುಣವಾಗಿ ಕುಟುಂಬದಲ್ಲಿ ಹಲವು ವಿಧದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮಹಿಳೆ ಕುಟುಂಬದ ಏಳ್ಗೆಗೆ ಆಧಾರಸ್ತಂಭವಾಗಿದ್ದಾಳೆ ಎಂದು ಕೌಶಲ ಕರ್ನಾಟಕ ಅಧಿಕಾರಿ ಶಿವಲೀಲಾ ಬಂಡೆ ಹೇಳಿದರು.

ನೂಪುರ ನೃತ್ಯ ಅಕಾಡೆಮಿ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ ಕರಕುಶಲ ಮೇಳ ಮತ್ತು ಸಂಕ್ರಾಂತಿ ಸಂಭ್ರಮದಲ್ಲಿ ಮಾತನಾಡಿ, ಮನೆ ನಿರ್ವಹಣೆ ಜತೆಯಲ್ಲಿ ಕುಟುಂಬಕ್ಕೆ ಆರ್ಥಿಕ ಬಲ ನೀಡುವ ಉದ್ಯಮಿಯಾಗಿ ಸೇವೆ ಸಲ್ಲಿಸುವಂತಹ ಅಸಾಧಾರಣ ಸಾಮಥ್ಯ ೯ ಮಹಿಳೆ ಹೊಂದಿದ್ದಾಳೆ ಎಂದರು.

ಮನೆಯಲ್ಲಿ ವಿವಿಧ ಬಗೆಯ ಕರಕುಶಲ ವಸ್ತುಗಳ ತಯಾರಿಯನ್ನು ಹವ್ಯಾಸವಾಗಿ ಹೊಂದಿರುವ ಅನೇಕ ಗೃಹಿಣಿಯರು ಅತ್ಯುತ್ತಮ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಆದರೆ ಮಾರುಕಟ್ಟೆಗೆ ಬಂದು ವ್ಯವಹಾರ ಮಾಡುವಲ್ಲಿ ಸಮಸ್ಯೆ ಹೊಂದಿದ್ದಾರೆ. ಕುಟುಂಬ ಮತ್ತು ವ್ಯವಹಾರ ಎರಡನ್ನೂ ನಿಭಾಯಿಸುವ ಆಕೆಯ ಅಸಾಧಾರಣ ಸಾಮಥ್ರ್ಯ ಗುರುತಿಸಿ, ಗೌರವಿಸಬೇಕು. ಗಂಡು, ಹೆಣ್ಣು ಸಮಾನ ಎಂಬ ಭಾವನೆ ಬರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ ಮಾತನಾಡಿ, ಮಹಿಳೆಯರ ಪ್ರತಿಭೆಗಳು ಪ್ರದರ್ಶಿಸಲು ಅವಕಾಶ ಬೇಕು. ಅದಕ್ಕಾಗಿ ನೃತ್ಯ ವಿದ್ಯಾರ್ಥಿಗಳ ಪಾಲಕರಿಗಾಗಿ ಕರಕುಶಲ ಮೇಳ ಆಯೋಜಿಸಿ ಅವರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸುವ ಯತ್ನ ಮಾಡಲಾಗಿದೆ. ತಿಂಗಳಿಗೊಮ್ಮೆ ಇಂಥ ಮೇಳ ಆಯೋಜಿಸಿ ವಸ್ತು ಪ್ರದರ್ಶನ, ಮಾರಾಟಕ್ಕೆ ಅನುವು ಮಾಡಿಕೊಡುವ ಉದ್ದೇಶವಿದೆ ಎಂದರು.

ಹಿರಿಯ ಜೀವಿ ಜಗದೇವಿ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ಡಾ.ಶ್ವೇತಾ ಮೇಗೂರ ಮಾತನಾಡಿದರು. ಸಿರಿಗನ್ನಡ ವೇದಿಕೆ ಮಹಿಳಾ ಘಟಕ ಅಧ್ಯಕ್ಷೆ ರೂಪಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತ್ತು. ಪ್ರಪುಲ್ಲ, ಮಮತಾ, ತುಳಸಿಬಾಯಿ, ಅರ್ಚನಾ, ಉಮಾ ಭಟ್, ಕ್ಷಮಾ ರಘುರಾಮ, ಜ್ಯೋತಿ ಕೈಲಾಸ, ಅನುಪಮಾ ಶಬರಿ, ರಘುರಾಮ ಉಪಾಧ್ಯಾಯ, ಉಮೇಶ ನಾಯಕ, ಸತೀಶ ಕೋಟ್ಯಾನ್, ಅನೀತಾ ಶೆಟ್ಟಿ ಇದ್ದರು. ಪ್ರಭಾಕರ ಎ.ಎಸ್. ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರಭು ನಿರೂಪಣೆ ಮಾಡಿದರು. ಮಂಗಲಾ ಭಾಗವತ್ ವಂದಿಸಿದರು.

ಆಹಾರ ವಸ್ತು ಪ್ರದರ್ಶನ
ಕಾರ್ಯಕ್ರಮದಲ್ಲಿ ಆಹಾರ ಹಾಗೂ ಕರಕುಶಲ ವಸ್ತು ಪ್ರದರ್ಶನ ನಡೆಯಿತು. ಆಹಾರ ವಿಭಾಗದ ಪ್ರದರ್ಶನ, ಮಾರಾಟದಲ್ಲಿ ಅತ್ಯುತ್ತಮ ಆರೋಗ್ಯಯುತ ಮತ್ತು ರುಚಿಯಾದ ತಿನಿಸು ತಯಾರಿಸಿದ ಸಂಧ್ಯಾ ಸಹಿನಾಳೆ ಮತ್ತು ರಾಜೇಶ್ವರಿ ವಾಸಿ ಅವರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು. ಕರಕುಶಲ ವಿಭಾಗದಲ್ಲಿ ಮುತ್ತಿನ ಹಾರ ಪಸ್೯ ಗಳ ತಯಾರಿ ಉದ್ಯಮದ ರೋಹಿಣಿ ಸಂತೋಷ ಮತ್ತು ವಿನ್ಯಾಸಭರಿತ ರವಿಕೆಗಳನ್ನು ತಯಾರಿಸುವ ವಿಭಾಗದಲ್ಲಿ ಪವಿತ್ರಾ ಪವನಕುಮಾರ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net