

ಚನ್ನರಾಯಪಟ್ಟಣ: ಸಂಸಾರದಲ್ಲಿ ಅನುಮಾನವೆಂಬ ಕೊಳೆಯನ್ನು ತೊಳೆದಾಗ ಮಾತ್ರ ಮೌಲ್ಯಯುತ ಜೀವನಾನುಭವ ಸಿಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಚಂಪಾ ಷಷ್ಠಿ ದಿನವಾರ ಮಂಗಳವಾರ ಸಂಜೆ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮನಸಿನಲ್ಲಿರುವ ಕಲ್ಮಶವನ್ನು ತೊಡೆದು ಹಾಕಿದ್ದಲ್ಲಿ ನೋಡುವ ದೃಷ್ಠಿಕೋನ ಸರಿಯಾಗಿಯೇ ಇರುತ್ತದೆ ಎಂದು ಆಶಿರ್ವಚನ ನೀಡಿದರು.
ಭಕ್ತಿಯ ಪರಂಪರೆ ಹಾಗೂ ಧಾರ್ಮಿಕತೆ ಇರುವ ಕಡೆ ಮನಸು ತೃಪ್ತಿಕರದೊಂದಿಗೆ ಆನಂದವಾಗಿರುತ್ತದೆ. ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಅಂತಃಕರಣ ಶುದ್ಧಿಯಾಗುತ್ತದೆ ಅಂತರಂಗ ಶುದ್ದಿಯಾಗಿದ್ದರೆ ಬೇರೆಯವರಿಗೆ ಕೆಡಕು ಬಯಸುವ ಗುಣ ದೂರವಾಗಲಿದೆ ಎಂದರು.
ಶುದ್ದ ಮನಸಿದ್ದರೆ ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿ ಸದಾ ನೆಲೆಸಿರುತ್ತದೆ. ಧರ್ಮ ಮತ್ತು ಆಧ್ಯಾತ್ಮಕ್ಕೆ ಜಾತಿಯ ಸೋಂಕಿಲ್ಲ ಭಕ್ತಿಯಿಂದ ಜ್ಞಾನ, ಜ್ಞಾನದಿಂದ ಮುಕ್ತಿ ಲಭಿಸುತ್ತದೆ. ಯಾವ ವ್ಯಕ್ತಿಯ ಅಂತಃಕರಣ ಪರಿಶುದ್ದವಾಗಿರುತ್ತದೆಯೋ ಆತ ಸಕಲ ಜೀವಿಗಳ ಹಿತ ಬಯಸುತ್ತಾನೆ ಎಂದು ತಿಳಿಸಿದರು.
ಶ್ರೀಗಳಿಗೆ ಸ್ವಾಗತ: ಇದಕ್ಕೂ ಮೊದಲು ಸಂಜೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಕುಂದೂರು ಗ್ರಾಮದ ಹೆಬ್ಬಾಗಿಲ ಬಳಿ ಪಾದಪೂಜೆ ಸಲ್ಲಿಸಿ ಸ್ವಾಗತಿಸಿದ ಭಕ್ತರು ಮಂಗಳವಾಧ್ಯ ಹಾಗೂ ಜೈಕಾರದೊಂದಿಗೆ ಮಠದವರಗೆ ಉತ್ಸವದಲ್ಲಿ ಕರೆತಂದರು. ಹೆಣ್ಣು ಮಕ್ಕಳು ಕಳಸ ಹೊತ್ತು ಸರದಿ ಸಾಲಿನಲ್ಲಿ ಸಾಗಿದರೆ, ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು.
ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಸದ್ಗುರು ಶ್ರೀ ಶಿವಲಿಂಗನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಹಾಗೂ ಕುಂರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.