ಕುಂದುವಾಡ ಕೆರೆಗೆ ಮೇಯರ್ ಭೇಟಿ

dvg-mayor-visit-mar-10-1.jpeg
Published on

ದಾವಣಗೆರೆ: ನಗರದ ಟಿ.ವಿ. ಸ್ಟೇಷನ್ ಹಾಗೂ ಕುಂದುವಾಡ ಕೆರೆಗೆ ಮೇಯರ್ ಬಿ.ಎಚ್. ವಿನಾಯಕ್ ನೇತೃತ್ವದ ಪಾಲಿಕೆ ಸದಸ್ಯರ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನೀರಿನ ಸಂಗ್ರಹ ಮತ್ತು ಸರಬರಾಜು ಆಗುತ್ತಿರುವ ಕುರಿತಂತೆ ಮಾಹಿತಿ ಪಡೆದ ಮೇಯರ್, ನೀರು ಸಂಗ್ರಹ ಇತರೆ ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ. ಬೇಸಿಗೆ ಬರುತ್ತಿದ್ದು, ಸಾರ್ವಜನಿಕರಿಗೆ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಸಬೂಬು ಹೇಳಬೇಡಿ. ಈಗಿನಿಂದಲೇ ಎಚ್ಚರ ವಹಿಸಬೇಕು. ಅಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಬಂದು ಪರಿಶೀಲಿಸಿದರೆ ಹೆಚ್ಚು ಸಮಸ್ಯೆಯಾಗುವುದನ್ನು ತಪ್ಪಿಸಬಹುದು ಎಂದು ಸೂಚನೆ ನೀಡಿದರು.

ಬೇಸಿಗೆ ವೇಳೆ ಸರಬರಾಜು ಮಾಡುವಷ್ಟು ನೀರಿನ ಸಂಗ್ರಹ ಇದೆ. ಜಲಸಿರಿ ಯೋಜನೆಯಡಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವೆಡೆ ಸ್ವಲ್ಪ ತೊಂದರೆ ಆಗಬಹುದು. ಜನರಿಗೆ ತೊಂದರೆಯಾಗದಂತೆ ನೀರು ಪೂರೈಸಲಾಗುವುದು ಎಂದು ಇಂಜಿನಿಯರ್ ಉದಯಕುಮಾರ್ ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತೆ ರೇಣುಕಾ, ಉಪಮೇಯರ್ ಯಶೋದಾ, ಪಾಲಿಕೆ ಸದಸ್ಯರಾದ ಗಡಿಗುಡಾಳು ಮಂಜುನಾಥ, ಕೆ. ಚಮನ್‌ಸಾಬ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಕೆ. ಎಂ. ವೀರೇಶ್ ತಂಡದಲ್ಲಿದ್ದರು. ಪಂಪ್‌ಹೌಸ್‌ಗೂ ಭೇಟಿ ನೀಡಿದ ತಂಡ, ಮೋಟಾರ್ ದುರಸ್ತಿಪಡಿಸಿದ್ದನ್ನು ಖಾತ್ರಿಪಡಿಸಿಕೊಂಡಿತು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net