

ಬೆಂಗಳೂರು ಗ್ರಾಮಾಂತರ : ಸಾರ್ವಜನಿಕ ಕುಂದುಕೊರತೆಗಳಿಗೆ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ಹೇಳಿದರು.
ಹೊಸಕೋಟೆ ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಗರಸಭಾ ಸದಸ್ಯರೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿದರು. ನಗರ ಸಭೆ ವ್ಯಾಪ್ತಿಯಲ್ಲಿ ಮೂಲಸೌಲಭ್ಯ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಸ್ಪಂದಿಸಬೇಕು. ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು ಎಂದರು. ನಗರಸಭೆಯಲ್ಲಿ ಯಾವುದಾದರೂ ಪ್ರಮುಖ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನೆರವು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಸ್ಯೆಗಳ ಪರಿಹಾರ ವಿಷಯದಲ್ಲಿ ಪಕ್ಷ ಭೇದ ಮರೆತು ಕಾರ್ಯ ನಿರ್ವಹಿಸಬೇಕು. ಚುನಾವಣೆ ಸಂದರ್ಭದಲ್ಲಿ ಪಕ್ಷಾಧಾರಿತವಾಗಿ ಹೋರಾಟ ಸೂಕ್ತ. ಅಭಿವೃದ್ಧಿ ವಿಚಾರದಲ್ಲಿ ಸಹಮತವಿರಲಿ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ದೂರವಿರಲಿ ಎಂದು ತಿಳಿಸಿದರು.
ತಾಂತ್ರಿಕ ಕಾರಣಗಳಿಂದ ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿ ನೆನೆಗುದಿಯಲ್ಲಿದೆ. ಆವರೆಗೂ ನಿಯೋಜಗೊಂಡಿರುವ ಆಡಳಿತಾ ಅಧಿಕಾರಿಯೊಂದಿಗೆ ಚರ್ಚಿಸಿ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಸಹಿಸಬೇಕು. ಈ ಸಂಬಂಧ ಆಡಳಿತ ಅಧಿಕಾರಿಯೊಂದಿಗೂ ಅಗತ್ಯ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕಳೆದ ವಿಧಾನಸಭಾ ಅವಧಿಯಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆಗೊಳಿಸಲಾಗಿತ್ತು. ಮತ್ತಷ್ಟು ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಅವಿರತ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.