

ಕುಂದಾಣ: ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.
ಸಂಘದ ಮೂವರು ಸಿಬ್ಬಂದಿಗೆ ಅಕ್ರಮವಾಗಿ 8.24 ಲಕ್ಷ ರೂ. ಪಾವತಿಸಲಾಗಿರುವ ಬಗ್ಗೆ ಗುರುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚರ್ಚೆ ನಡೆಯಿತು.
ಈ ವೇಳೆ ಮಾತನಾಡಿದ ಷೇರುದಾರ ನಾಗರಾಜು ಅಕ್ರಮದ ಮಾಹಿತಿ ಕೊಡಲು ನಿರಾಕರಿಸಲಾಗುತ್ತಿದ್ದು, ನಮ್ಮನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್, ಹುದ್ದೆಗೆ ತಕ್ಕ ವಿದ್ಯಾರ್ಹತೆ ಹೊಂದಿಲ್ಲ. ಮತ್ತು ಇವರ ಪತ್ನಿ ಸುಮಾ, ತಿಮ್ಮರಾಯಪ್ಪ ಎಂಬುವವರು ವೇತನ ರೂಪದಲ್ಲಿ ಹೆಚ್ಚಿನ ಹಣ ಪಡೆದುಕೊಂಡಿದ್ದಾರೆ. ಇದರಿಂದ ಸಂಘಕ್ಕೆ ನಷ್ಟವಾಗಿದೆ ಎಂದು ನಾಗರಾಜು ದೂರಿದರು. ಆದರೆ ಈ ಬಗ್ಗೆ ಯಾರೊಬ್ಬರೂ ಪ್ರತಿಕ್ರಿಯೆ ನೀಡಲಿಲ್ಲ.
ಸಂಘಕ್ಕೆ 6.24 ಲಕ್ಷ ರೂ.ಲಾಭ: ಕಳೆದ ಸಾಲಿನಲ್ಲಿ ಸಂಘಕ್ಕೆ 6.24 ಲಕ್ಷ ರೂ. ಲಾಭ ಬಂದಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವೃತ್ತಿಪರ ನಿರ್ದೇಶಕ ಕಾಮೇನಹಳ್ಳಿ ಕೆ.ರಮೇಶ್ ಹರ್ಷ ವ್ಯಕ್ತಪಡಿಸಿದರು. ಕುಂದಾಣದಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಟ್ಟರೆ ಬೆಂಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ 2 ಕೋಟಿ ರೂ. ನೆರವು ನೀಡುವುದಾಗಿ ಭರವಸೆ ನೀಡಿದರು.
ತಾಪಂ ಮಾಜಿ ಉಪಾಧ್ಯಕ್ಷ ಪಟಾಲಪ್ಪ ಮಾತನಾಡಿ, ಆಲೂರು ದುದ್ದನಹಳ್ಳಿಯಲ್ಲಿ ವಿಎಸ್ಸೆಸ್ಸೆನ್ ಆರಂಭಿಸಿದರೆ ಸ್ವಂತ ಜಮೀನನ್ನು ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದರು.
ಸಂಘದ ನಿರ್ದೇಶಕರಾದ ಬಿ.ವಿ.ಚನ್ನಕೃಷ್ಣಪ್ಪ, ಎನ್.ಮಂಜುನಾಥ್, ಎಚ್.ಬಸವರಾಜು, ಡಿ.ಎನ್.ಮಧು, ಡಿ.ಜಿ. ಪ್ರಭಾಕರ್, ಎಸ್.ಎ. ಮಲ್ಲಪ್ಪ, ಎಂ.ವಿಜಯ್, ಸುಶೀಲಮ್ಮ, ಚಿಕ್ಕಮುನಿಶಾಮಪ್ಪ, ಗೋವಿಂದರಾಜು, ಮಾಜಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಮುಖಂಡರಾದ ಬಾಲಕೃಷ್ಣ, ಲಕ್ಷ್ಮಣ್, ಮುನಿರಾಜು ಮತ್ತಿತರರಿದ್ದರು.