ಕುಂದಗೋಳ ಕ್ಷೇತ್ರ ಕೇಸರಿಮಯ ಸಂಕಲ್ಪ

3-Saunshi-1
Published on

ಸಂಶಿ: ಕುಂದಗೋಳ ತಾಲೂಕಿನ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ವಾಸ್ತವ್ಯ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟಿಸಿ ಮುಂಬರುವ ದಿನಗಳಲ್ಲಿ ಸ್ಥಳೀಯ ಹಾಗೂ ವಿಧಾನಸಭೆಗಳಲ್ಲಿ ಜಯಭೇರಿ ಬಾರಿಸಿ ಕ್ಷೇತ್ರವನ್ನುಕೇಸರಿಮಯ ಮಾಡುವ ಸಂಕಲ್ಪ ಹೊಂದಿದ್ದೇನೆ. ಅದಕ್ಕೆ ಕಾರ್ಯಕರ್ತರ ಸಹಕಾರ ಬಹಳಷ್ಟು ಮುಖ್ಯವಾಗಿದೆ ಎಂದು ಬಿಜೆಪಿ ಗ್ರಾಮಾಂತರ ಘಟಕದ ಧಾರವಾಡ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಹೇಳಿದರು.

ಗ್ರಾಮದ ಶ್ರೀ ಫಕೀರೇಶ್ವರ ಮಠದಲ್ಲಿ ಬಿಜೆಪಿ ಗ್ರಾಮ ಘಟಕ ಹಾಗೂ ಅಭಿಮಾನಿ ಬಳಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಂಶಿ ನನ್ನ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದ ಗ್ರಾಮ. ಮೂವತ್ತು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆ ಫಲವಾಗಿ ಹಿರಿಯರು ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು, ಹಿರಿಯರು ಹಾಗೂ ಅಭಿಮಾನಿಗಳು ನೆರವೇರಿಸಿದ ಸತ್ಕಾರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ, 1982ರಲ್ಲಿ ಕುಂದಗೋಳಮಠ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರ ಪರ ಪ್ರಚಾರ ಮಾಡಿದ್ದೆ. ಇಂದು ಅವರು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಪಣತೊಟ್ಟಿದ್ದು ಸಂತಸ ತಂದಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮುಖಂಡ ಡಿ.ವೈ. ಲಕ್ಕನಗೌಡ್ರ, ಬೇರೆ ಪಕ್ಷಗಳಂತೆ ಸಂಪತ್ತು ಮತ್ತು ಅಂತಸ್ತು ನೋಡಿ ಸ್ಥಾನಮಾನ ನೀಡುವ ಜಾಯಮಾನ ಬಿಜೆಪಿಯದಲ್ಲ. ಇಲ್ಲಿ ತಾಳ್ಮೆ, ಶಿಸ್ತು, ನಿಷ್ಠಾವಂತ ಪ್ರಾಮಾಣಿಕ ಸೇವೆ ಆಧರಿಸಿ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಅದಕ್ಕೆ ಬಸವರಾಜ ಕುಂದಗೋಳಮಠ ನಿದರ್ಶನವಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ರವಿಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಆರ್.ಎನ್. ಪಾಟೀಲ, ರಮೇಶ ಕೊಪ್ಪದ, ಯಲ್ಲಪ್ಪಗೌಡ ಪಾಟೀಲ, ಗುರು ಕುಂದಗೋಳಮಠ, ಬಾಬುಗೌಡ ಪಾಟೀಲ, ಮಾಲತೇಶ ಶ್ಯಾಗೋಟಿ, ಪ್ರಕಾಶಗೌಡ ಪಾಟೀಲ, ಬಸವರಾಜ ಗುಡಗೇರಿ, ಮಾಣಿಕ್ಯ ಚಿಲ್ಲೂರ, ಪ್ರಕಾಶ ಕುಬಿಹಾಳ, ಫಕ್ಕಜ್ಜ ಕೋರಿ, ಸಿದ್ದು ಶಿರಹಟ್ಟಿ, ಹಾಲಪ್ಪ ತಡಾಳ, ಚನ್ನಪ್ಪ ಅಗಡಿ, ಗುರುಶಿದ್ದಪ್ಪ ನಾಯ್ಕರ, ಶಿವಾನಂದ ಕುಂದಗೋಳ, ಸಂತೋಷ ಬೆಟದೂರ, ನಿಂಗಪ್ಪ ಕುರಟ್ಟಿ, ಮಹಾದೇವ ಸುಳ್ಳದ, ರಾಜು ಪುಟ್ಟಣ್ಣವರ, ಫಕೀರಗೌಡ ಬಳಗಾನೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net