

ಹಾಸನ : ಕುಂಚಿಟಿಗರಿಗೆ ಕುಲಶಾಸ ಅಧ್ಯಯನ ವರದಿ ಯಥಾವತ್ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರದ ಪ್ರವರ್ಗ 1 ಮತ್ತು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಕುಂಚಿಟಿಗರ ಸಂಘದ ವತಿಯಿಂದ ಶುಕ್ರವಾರ ಅರಕಲಗೂಡಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ರಾಜ್ಯದ 17 ಜಿಲ್ಲೆಗಳಲ್ಲಿ ಕುಂಚಿಟಿಗ ಜನಾಂಗ ವಾಸಿಸುತ್ತಿದ್ದು, ಕಳೆದ 28 ವರ್ಷಗಳಿಂದ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಕೈತಪ್ಪಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ನಷ ್ಟ ಉಂಟಾಗಿದೆ. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪ್ರವರ್ಗ 3ಎ ನಲ್ಲಿ ಬರುವ ಇತರ ಎಲ್ಲ ಜಾತಿಗಳಿಗೆ ಕೇಂದ್ರ ಒಬಿಸಿ ಮೀಸಲಾತಿ ನೀಡಿ ಕುಂಚಿಟಿಗರನ್ನು ಕೈಬಿಟ್ಟು ಮೀಸಲಾತಿ ತಾರತಮ್ಯ ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸಮುದಾಯದ ಜನರು ಬಹುತೇಕ ಹಳ್ಳಿಗಾಡಿನ ಕುಗ್ರಾಮಗಳಲ್ಲಿ ನೆಲೆಸಿ ಪಶುಸಂಗೋಪನೆ, ಹೈನುಗಾರಿಕೆ, ಕೂಲಿ ಮತ್ತು ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಿದ್ದಾರೆ. ಸ್ಥಿತಿವಂತರ ಮಕ್ಕಳ ಜತೆ ಜನರಲ್ ಮೆರಿಟ್‌ನಲ್ಲಿ ಸ್ಪರ್ಧೆ ಮಾಡುವುದು ಕಷ್ಟಕರವಾಗಿದೆ. ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ಇಲ್ಲದೆ, ನವೋದಯ ಶಾಲೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣ ಪಡೆಯಲು ಆಗುತ್ತಿಲ್ಲ. ರೈಲ್ವೆ, ಅಂಚೆ, ಬ್ಯಾಂಕಿಂಗ್, ಮಿಲಿಟರಿ, ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಯುಪಿಎಸ್ಸಿ ಮೂಲಕ ಭರ್ತಿ ಮಾಡುವ ಉನ್ನತ ಹುದ್ದೆಗಳು ಕೈತಪ್ಪಿ ಹೋಗುತ್ತಿವೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ವಂಚಿತರಾಗಿದ್ದೇವೆ. ಕುಂಚಿಟಿಗರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಒಬಿಸಿ ಮೀಸಲಾತಿ ಕಗ್ಗಂಟಾಗಿ ಉಳಿದಿದೆ. ಕುಂಚಿಟಿಗರು ಒಡೆದು ಆಳುವ ತಂತ್ರಕ್ಕೆ ಬಲಿಯಾಗಿ ಅತಂತ್ರ ಸ್ಥಿತಿ ತಲುಪಿದ್ದೇವೆ. ಮೀಸಲಾತಿ ಇಲ್ಲದ ಶೈಕ್ಷಣಿಕ, ಔದ್ಯೋಗಿಕ ಸಾಮಾಜಿಕ, ಆರ್ಥಿಕ ಹಿನ್ನಡೆಯಾಗಿದೆ. ಮೀಸಲಾತಿ ಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಪಾಂಡುರಂಗ, ತಿಮ್ಮೇಗೌಡ, ಅಶೋಕ್, ಗೋವಿಂದೇಗೌಡ, ಹರೀಶ್, ದಿನೇಶ್, ಕಿರಣ್, ಚಂದ್ರಶೇಖರ್, ಕೃಷ್ಣೇಗೌಡ, ರಾಜೇಗೌಡ, ವಿಷ್ಣು ಇತರರು ಇದ್ದರು.