ಕುಂಚಿಕೊರವ ಸಮಾಜದಿಂದ ಕೋಳಿ ಬಲಿ

12SGN(GR)03
Published on

ಶಿಗ್ಗಾಂವಿ(ಗ್ರಾ): ಪಟ್ಟಣದ ಕುಂಚಿಕೊರವ (ಕೊರಮ) ಸಮಾಜದವರು ಹುತ್ತಕ್ಕೆ ಹಾಲೆರೆದು, ಕೋಳಿಗಳನ್ನು ಬಲಿ ಕೊಟ್ಟು ಗುರುವಾರ ವಿಶಿಷ್ಟ ರೀತಿಯಲ್ಲಿ ನಾಗ ಪಂಚಮಿ ಆಚರಿಸಿದರು.

ಸುಮಾರು ವರ್ಷಗಳ ಹಿಂದೆ ಕೊರಮ ಸಮಾಜದ ಕೆಲ ಮನೆತನದವರು ಒಂದು ಮರದ ಕೆಳಗೆ ಕುಳಿತು ಸಭೆ ಮಾಡುವಾಗ ಮೇಲಿದ್ದ ನಾಗರ ಹಾವು ಜಾರಿ ಸಭೆಯ ಮಧ್ಯೆ ಬಿದ್ದಿದೆ. ಆಗ ಅಲ್ಲಿದ್ದ ಕೆಲವರು ಗಾಬರಿಗೊಂಡು ಹಾವನ್ನು ಹೊಡೆದು ಸಾಯಿಸಿದಾಗ, ಸಭೆಯಲ್ಲಿದ್ದ ಉಳಿದ ಮುಖಂಡರು, ಹಾವು ಹೊಡೆದಿರುವುದು ತಪ್ಪು. ಇದರಿಂದ ನಾವೆಲ್ಲರೂ ಶಾಪಗ್ರಸ್ತರಾದೆವು ಎಂದು ನೊಂದುಕೊಂಡರಂತೆ. ನಂತರ ಶಾಪ ವಿಮೋಚನೆಗಾಗಿ ಅದೇ ಸ್ಥಳದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಪ್ರತಿ ನಾಗ ಪಂಚಮಿ ದಿನದಂದು ನಾಗದೇವತೆಗೆ ಹಾಲಿನ ಜತೆಗೆ ಕೋಳಿಗಳನ್ನು ಬಲಿಕೊಟ್ಟು ಹಬ್ಬ ಆಚರಿಸೋಣ ಎಂದು ತೀರ್ಮಾನ ಕೈಗೊಂಡರು. ಅದರಂತೆ ಅಂದಿನಿಂದ ಇಂದಿನವರೆಗೂ ಸಂಪ್ರದಾಯ ಪಾಲಿಸಲಾಗುತ್ತಿದೆ ಎಂದು ಸಮಾಜದ ಮುಖಂಡ ಮಂಜುನಾಥ ಹುರಳಿಕೊಪ್ಪಿ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ನಾಗ ಪಂಚಮಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸದಿದ್ದರೆ ನಮಗೆ ಕಣ್ಣಿನ ಬಾಧೆ, ಸಾಂಕ್ರಾಮಿಕ ರೋಗಗಳು ತಗುಲುತ್ತವೆ. ಅಲ್ಲದೆ, ನಾಗದೇವತೆ ಕನಸಿನಲ್ಲಿ ಬಂದು ಹೆದರಿಸುವ ಘಟನೆಗಳೂ ನಡೆಯುತ್ತವೆ ಎಂದು ಆಚರಣೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net