

ಚಿಂಚೋಳಿ: ಕಲ್ಯಾಣ ಕರ್ನಾಟಕದ ಬಹುದೊಡ್ಡ ಅರಣ್ಯ ಪ್ರದೇಶವೆಂದೇ ಖ್ಯಾತಿ ಪಡೆದಿರುವ ಕುಂಚಾವರಂ ವನ್ಯಜೀವಿ ಅಭಯಾರಣ್ಯಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಕುಟುಂಬದೊಂದಿಗೆ ಶನಿವಾರ ಭೇಟಿ ನೀಡಿ, ವನಸಿರಿಯ ಸೌಂದರ್ಯ ಸವಿದರು.
ಬೆಳಂ ಬೆಳಗ್ಗೆಯೇ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಫಾರೆಸ್ಟ್ಗೆ ಭೇಟಿ ನೀಡಿ ಡಿಸಿ, ಸುಂದರ ಹಾಗೂ ಮನಮೋಹಕ ವಾತಾವರಣಕ್ಕೆ ಮನಸೋತರು. ಮೊದಲು ಚಂದ್ರಪಳ್ಳಿ ಜಲಾಶಯದ ಪ್ರಮುಖ ಸ್ಥಳಗಳಲ್ಲಿ ಸುತ್ತಾಡಿದರು. ಅಲ್ಲದೆ ಕಟ್ಟಿಗೆ ಮನೆಗಳನ್ನು ವೀಕ್ಷಿಸಿದರು.
ಜಿಟಿ-ಜಿಟಿ ಮಳೆಯ ಮಧ್ಯೆದಲ್ಲಿಯೇ ಕೊಡೆ ಹಿಡಿದುಕೊಂಡು ಕಲ್ಲಿನ ಹಾದಿಯಲ್ಲಿ ನಡೆದುಕೊಂಡು ಹೋಗಿ ಮಾಣಿಕಪುರ ಜಲಾಶಯವನ್ನು ವೀಕ್ಷಿಸಿದರು. ಕೆಲ ಸಮಯ ವಾಟರ್ ಫಾಲ್ಸ್ ಬಳಿ ಕಳೆದರು. ದುಮ್ಮಿಕ್ಕುತ್ತಿರುವ ನೀರನ್ನು ಕಂಡು ಖುಷಿ ವ್ಯಕ್ತಪಡಿಸಿದರು. ಇಷ್ಟೊಂದು ಸುಂದರ ಪ್ರದೇಶವಿದ್ದು, ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ. ಜನರು ಬರಲು ಅನುಕೂಲ ಕಲ್ಪಿಸಿ ಎಂದು ಸ್ಥಳದಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಳಿಕ ಎತ್ತಿಪೋತಾ, ವೀಕ್ಷಣೆ ಗೋಪುರು, ಗೊಟ್ಟಂಗೊಟ್ಟಾ ಪ್ರದೇಶ ಸೇರಿ ಇನ್ನಿತರ ಸ್ಥಳಗಳನ್ನು ವೀಕ್ಷಿಸಿದರು. ಮಧ್ಯಾಹ್ನ 2 ಗಂಟೆವರೆಗೂ ಅರಣ್ಯದ ಒಡಲಿನಲ್ಲೇ ಸಮಯಕಳೆದರು. ಪ್ರವಾಸೋದ್ಯಮ ಇಲಾಖೆಯ ರಾಜು, ಅರಣ್ಯ ಅಧಿಕಾರಿ ಸಿದ್ದಾರೂಢ, ಅಲೇಶ ಕೋರವಾರ, ರಾಹುಲ್, ಸಿಬ್ಬಂದಿ ದೇವಪ್ಪ, ಪ್ರಭು, ರಮೇಶ, ತುಕಾರಾಮ, ಹಣಮಂತ ಇತರರಿದ್ದರು.