

ಎನ್.ಆರ್.ಪುರ: ಕನಕದಾಸರು 4 ಪುಸ್ತಕ ಹಾಗೂ 316 ಕೀರ್ತನೆಗಳನ್ನು ರಚನೆ ಮಾಡಿದ್ದರು. ಅವರು ಕೀರ್ತನೆಗಳ ಮೂಲಕ ಸಮಾಜದ ದೋಷ ತಿದ್ದಲು ಯತ್ನಿಸಿದ್ದರು ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ಪ ಛಲವಾದಿ ತಿಳಿಸಿದರು.
ಸೋಮವಾರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಹಾಗೂ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ಮೊದಲು ಮೋಹನ ತರಂಗಿಣಿ ಎಂಬ ಕೃತಿ ರಚಿಸಿದರು. ನಂತರ ನಳ ಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿ ಭಕ್ತಸಾರ ಎಂಬ ಕೃತಿಗಳನ್ನು ರಚಿಸಿದರು. ಕನಕದಾಸರ ಮೊದಲ ಹೆಸರು ತಿಮ್ಮಪ್ಪ ಆಗಿತ್ತು. ತಂದೆ ಬೀರೇಗೌಡರ ನಿಧನದ ನಂತರ ಅಧಿಕಾರಕ್ಕೆ ಬಂದ ತಿಮ್ಮಪ್ಪ ಅವರು ದೇವಸ್ಥಾನ ಕಟ್ಟುವಾಗ ಬಂಗಾರದ ನಿಧಿ ಸಿಕ್ಕಿತ್ತು. ಅದನ್ನು ಸ್ವಂತಕ್ಕೆ ಉಪಯೋಗಿಸದೆ ಅವರು ದಾನ ಮಾಡಿದರು. ನಂತರ ಅವರ ಹೆಸರು ಕನಕದಾಸ ಎಂದು ಬದಲಾಯಿತು ಎಂದರು.
ಕನಕದಾಸರು ಜನಿಸಿದ ಕಾಗಿನೆಲೆ ಗ್ರಾಮದ ಅಭಿವೃದ್ಧಿಗೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಕೆಲವು ವಿಶ್ವ ವಿದ್ಯಾಲಯಗಳು ಕನಕದಾಸರ ಕೀರ್ತನೆ ಬಗ್ಗೆ ಅಧ್ಯಯನ ಪೀಠ ಸ್ಥಾಪಿಸಿವೆ. ಕನಕದಾಸರ ಕೀರ್ತನೆಗಳು ಹಿಂದಿ, ಇಂಗ್ಲಿಷ್‌ಗೆ ತರ್ಜುಮೆಯಾಗಿವೆ ಎಂದರು.
ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮಾತನಾಡಿ, ಚಿತ್ರದುರ್ಗದ ಕೋಟೆ ಮೇಲೆ ಹೈದರಾಲಿ ದಾಳಿ ಮಾಡಿದಾಗ ಒನಕೆಯನ್ನೇ ಆಯುಧ ಮಾಡಿಕೊಂಡು ಶತ್ರು ಸೈನ್ಯವನ್ನು ಸದೆ ಪಡೆದ ಒನಕೆ ಓಬವ್ವನ ಕಿಂಡಿ ಈಗಲೂ ಇದೆ ಎಂದರು.
ಎಪಿಎಂಸಿ ಸದಸ್ಯ ಎಚ್.ಎಂ.ಶಿವಣ್ಣ ಮಾತನಾಡಿ, ಇತಿಹಾಸ ಪುಟಗಳಲ್ಲಿ ಕೆಲವು ಸಮುದಾಯಗಳು ಮರೆಯಾಗುತ್ತಿವೆ. ಈ ನೆಲದ ಸತ್ಯದ ವಿಚಾರಗಳು ಮುನ್ನೆಲೆಗೆ ಬರಬೇಕು. ದೇಶಕ್ಕೆ ದಲಿತರು ನೀಡಿದ ಕೊಡುಗೆಯನ್ನು ಮರೆಯಬಾರದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಭಾನು, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ, ಸದಸ್ಯ ಮುಕುಂದ, ಶೃಂಗೇರಿ ಕ್ಷೇತ್ರದ ಛಲವಾದಿ ಮಹಾಸಭಾ ಅಧ್ಯಕ್ಷ ಡಿ.ರಾಮು, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಪುರುಷೋತ್ತಮ್, ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷ ಮಂಜುನಾಥ್, ಜಯಂತಿ, ಗುರುದತ್ ಕಾಮತ್, ಎನ್.ಎಲ್.ಮನೀಶ್ ಇದ್ದರು.