ಕೀಟಬಾಧೆ ಹತೋಟಿಗೆ ಕ್ರಮವಹಿಸಿ

01
Published on

ಅಧಿಕಾರಿಗಳಿಗೆ ಶಾಸಕ ಕೆ.ಷಡಕ್ಷರಿ ಸೂಚನೆ, ತಿಪಟೂರಿನಲ್ಲಿ ಟಾಸ್ಕ್​ ಫೋರ್ಸ್​ ಸಭೆ

ತಿಪಟೂರು: ಪೂರ್ವ ಮುಂಗಾರು ಬೆಳೆಗಳನ್ನು ಕಾಡುತ್ತಿರುವ ಕೀಟಬಾಧೆ ಹತೋಟಿಗೆ ಸೂಕ್ತ ಕ್ರಮ ವಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ

ಕೆ.ಷಡಕ್ಷರಿ ತಾಕೀತು ಮಾಡಿದರು.

ನಗರದ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ಕುಡಿಯುವ ನೀರು, ತಾಲೂಕಿನಾದ್ಯಂತ ನಡೆದಿರುವ ಕೃಷಿ ಚಟುವಟಿಕೆ ಮತ್ತು ಪಶುಗಳ ಆರೋಗ್ಯ ಸೇರಿ ಕರೆಯಲಾಗಿದ್ದ ಅಧಿಕಾರಿಗಳ ಟಾಸ್ಕ್​ ಫೋರ್ಸ್​ ಸಭೆಯ ಮಾತನಾಡಿ, ತಾಲೂಕಿನಲ್ಲಿ ನಿಗದಿತ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದ ಪರಿಣಾಮ ಹಲವಾರು ಗ್ರಾಮಗಳಲ್ಲಿ ಪ್ರಾರಂಭದ ಹಂತದಲ್ಲೇ ಹೆಸರು ಇನ್ನಿತರ ಪೈರುಗಳು ಕೀಟಬಾಧೆಗೆ ತುತ್ತಾಗಿರುವುದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ

ಬೆಳೆಗಳ ರಕ್ಷಣೆ ಮತ್ತು ಕೀಟಬಾಧೆ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ಇನ್ನು ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಮತ್ತು ನ್ಯಾಕೇನಹಳ್ಳಿಯ ಕೆಲವೆಡೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಈಗಲೂ ಮುಂದುವರಿದಿದ್ದು, ಇನ್ನಾದರೂ ಆ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಗೆ ಸೂಚಿಸಿದಾಗ, ಜಿಲ್ಲಾಧಿಕಾರಿಗಳಿಂದ ಅಗತ್ಯವಿರುವಲ್ಲಿ ಹೆಚ್ಚುವರಿ ಕೊಳವೆಬಾವಿ ಕೊರೆಸಲು ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಕೊಳವೆ ಬಾವಿ ಕೊರೆಸಲಾಗುವುದು ಎಂದು ತಾಪಂ ಅಡಳಿತಾಧಿಕಾರಿ ಎಚ್​.ಎಂ.ಸುದರ್ಶನ್​ ತಿಳಿಸಿದರು.

ಮಳೆ, ಗಾಳಿ ರಭಸಕ್ಕೆ ವಿದ್ಯುತ್​ ತಂತಿಗಳು ಮುರಿದು ಬಿದ್ದು ಅವಘಡಗಳು ಸಂಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು. ಅಗತ್ಯ ಕ್ರಮ ವಹಿಸಿ. ವಿದ್ಯುತ್​ ಅಪಘಾತಗಳು ಸಂಭವಿಸದಂತೆೆ ಎಚ್ಚರವಹಿಸಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೀದಿ ನಾಯಿಗಳಿಗೆ ರೇಬಿಸ್​ ಚುಚ್ಚುಮದ್ದು ನೀಡುವ ಪ್ರಕ್ರಿಯೆ ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭವಾಗಿದೆ. ನಗರ ವ್ಯಾಪ್ತಿಯಲ್ಲಿ ಕೂಡಾ ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ಪ್ರಾರಂಭವಾಗಲಿದ್ದು, ಇದಕ್ಕೆ ಅಗತ್ಯವಿರುವ ಶೆಡ್​ನ ಪೂರ್ವ ತಯಾರಿ ಮುಗಿದ ತಕ್ಷಣ ಕಾರ್ಯಾಚರಣೆ

ಪ್ರಾರಂಭಿಸಲಾಗುವುದು ಎಂದು ನಗರಾಯುಕ್ತ ಬಿಶ್ವೇಶ್ವರ ಬದರಗಡೆ ತಿಳಿಸಿದರು.

ಕಳೆದ ವಾರದಿಂದ ಹೇಮಾವತಿ ಜಲಾಶಯದಿಂದ ತುಮಕೂರು ಭಾಗದ ವಿಶ್ವೇಶ್ವರಯ್ಯ ನಾಲೆಗೆ ಹೇಮಾವತಿ ನೀರು ಬಿಡುಗಡೆಯಾಗಿದ್ದು, ಸದರಿ ನೀರನ್ನು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಭರ್ತಿ ಮಾಡಿಕೊಳ್ಳುವ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ತಹಶೀಲ್ದಾರ್​ ಎಸ್​.ಪವನ್​ಕುಮಾರ್​, ತಾಪಂ ಆಡಳಿತಾಧಿಕಾರಿ ಎಚ್​.ಎಂ.ಸುದರ್ಶನ್​, ನಗರಾಯುಕ್ತ ವಿಶ್ವೇಶ್ವರ ಬದರಗಡೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಪಿ.ಪವನ್​, ಬೆಸ್ಕಾಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮನೋಹರ್​, ಪಶುವೈದ್ಯ ಇಲಾಖೆಯ ಡಾ. ಕೆ.ಜಿ.ನಂದೀಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net