ಕೀಟನಾಶಕ ಒದಗಿಸಲು ಕ್ರಮ

18-klr-6
Published on

ಕ್ಯಾಲನೂರು: ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಆಗುತ್ತಿರುವ ಶೋಷಣೆ ತಪ್ಪಿಸಲು ಸೊಸೈಟಿಗಳ ಮೂಲಕವೇ ಗೊಬ್ಬರ, ಕೀಟನಾಶಕ ಔಷಧ ಸೇರಿ ಕೃಷಿ ಸಲಕರಣೆಗಳನ್ನು ರೈತರಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸೊಸೈಟಿಗಳಲ್ಲಿ ಪಡಿತರ ಹಾಗೂ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಖಾಸಗಿ ಔಷಧ ಅಂಗಡಿಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಗಮನಕ್ಕೆ ತಂದಿದ್ದಾರೆ. ರೈತರು ಖಾಸಗಿ ಅಂಗಡಿಗಳಿಗೆ ಹೋಗುವುದನ್ನು ಬಿಟ್ಟು ಸಹಕಾರ ಸಂಘಕ್ಕೆ ಬರಬೇಕು ಎಂದು ಕೋರಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 205 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಹಿಂದೆ ಸಂಘಗಳು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಪ್ರಸ್ತುತ ಸಂಘಗಳು ಲಾಭದಾಯವಾಗಿ ನಡೆಯುತ್ತಿದೆ. ಸೊಸೈಟಿಗಳನ್ನು ಗಣಕೀಕರಣಗೊಳಿಸುವ ಮೂಲಕ ಪಾರದರ್ಶಕ ಆಡಳಿತ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಲೋಪ ಎದುರಾಗದಂತೆ ಬ್ಯಾಂಕ್ ಸೇವೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ರೈತರು ಸಹಕಾರ ಸಂಘದಲ್ಲಿ ನೋಂದಣಿ ಮಾಡಿಸಿಕೊಂಡು ದೊರೆಯುವ ಸೌಕರ್ಯ ಸದ್ಬಳಕೆ ಮಾಡಿಕೊಂಡಾಗ ಅಭಿವೃದ್ಧಿ ಹೊಂದಲು ಸಾಧ್ಯ. ರೈತರು ವಹಿವಾಟುಗಳನ್ನು ಸಹಕಾರ ಬ್ಯಾಂಕ್‌ಗಳಲ್ಲಿ ನಡೆಸಬೇಕು, ಜತೆಗೆ ಸಾಲ ಸೌಲಭ್ಯ ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಬ್ಯಾಂಕಿನ ಮತ್ತಷ್ಟು ಅಭಿವೃದ್ಧಿಗೆ ಮಹಿಳೆಯರು, ರೈತರು ಸಹಕಾರ ನೀಡಬೇಕು ಎಂದರು.

ಸೊಸೈಟಿಯಿಂದಲೇ ಸಾಲ: ಸೊಸೈಟಿ ಸ್ಥಾಪನೆಯಾಗಿ 43 ವರ್ಷಗಳಾಗಿವೆ. 2008-2009ನೇ ಸಾಲಿನಲ್ಲಿ 19.53 ಲಕ್ಷ ರೂ. ನಷ್ಟದಲ್ಲಿತ್ತು. 2019-2020 ಸಾಲಿನಲ್ಲಿ 44.65 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ವಾಹಿವಾಟು ನಡೆಸುವ ಮೂಲಕ ಅಪೆಕ್ಸ್ ಬ್ಯಾಂಕಿನಿಂದ ಅತ್ಯುತ್ತಮ ಸಹಕಾರ ಸಂಘವಾಗಿ ಹೊರಹೊಮ್ಮಿದೆ. ಸೊಸೈಟಿಯಿಂದಲೇ ರೈತರಿಗೆ ಬೆಳೆ ಸಾಲ, ಸ್ತ್ರೀಶಕ್ತಿ ಸಾಲ, ಗೃಹ ಸಾಲ ಸೇರಿದಂತೆ ವಿವಿಧರ ರೀತಿಯ ಸಾಲ ನೀಡಲಾಗುತ್ತಿದೆ ಎಂದು ಕಡಗಟ್ಟೂರು ಸಹಕಾರ ಸಂಘದ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಮೂರಂಡಹಳ್ಳಿ ಗೋಪಾಲ್, ರಾಜ್ಯ ಸರಕು ಮತ್ತು ಮಾರಾಟಗಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು, ಸೊಸೈಟಿ ನಿರ್ದೇಶಕರಾದ ಎಂ.ಡೇವಿಡ್, ಎಸ್.ಕೃಷ್ಣಪ್ಪ, ಬಿ.ಮುನಿರಾಜ, ವೆಂಕಟೇಶಪ್ಪ, ಡಿ.ರಾಜಣ್ಣ, ರಾಮಚಂದ್ರ, ಅಮರೇಶ್, ವಿಜಯಮ್ಮ, ಬೈರಮ್ಮ, ಚೌಡರೆಡ್ಡಿ, ಸಿಬ್ಬಂದಿ ಮುನೀಶ್ವರಪ್ಪ, ಎಸ್.ನಾಗೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net