

ಬೆಳಗಾವಿ: ವಾರ್ಷಿಕ ಆರು ಸಾವಿರ ರೂ.ಸಹಾಯ ಧನ ಒದಗಿಸುವ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ರೈತರಿಗೆ ತಲುಪಿಸುವುದಕ್ಕಾಗಿ ರೈತರ ಬ್ಯಾಂಕ್ ಖಾತೆಗೆ ಇ&ಕೆವೈಸಿ ಜೋಡಣೆಯಲ್ಲಿ ಸಕ್ಕರೆ ಜಿಲ್ಲೆ ಖ್ಯಾತಿಯ ಬೆಳಗಾವಿ ಮತ್ತು ಮಂಡ್ಯ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿವೆ. ತಾಲೂಕು ಮಟ್ಟದಲ್ಲಿ ಹೆಚ್ಚಿನ ಗುರಿ ಸಾಧನೆಗೈದ ರಾಜ್ಯದ ಟಾಪ್ ಐದು ಪಟ್ಟಿಯಲ್ಲಿ ಬೆಳಗಾವಿಯ ನಾಲ್ಕು ತಾಲೂಕುಗಳು ಸ್ಥಾನ ಪಡೆದಿವೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಲ್ಲಿ ನೋಂದಾಯಿತ ಒಟ್ಟು 53.95 ಲಕ್ಷ ರೈತರ ಪೈಕಿ 21.04 ಲಕ್ಷ ರೈತರು ಮಾತ್ರ ಇ&ಕೆವೈಸಿ ಜೋಡಣೆ ಮಾಡಿದ್ದು, ಶೇ.39ರಷ್ಟು ಮಾತ್ರ ಗುರಿಸಾಧನೆ ಆಗಿದೆ. ಇನ್ನೂ 32.91 ಲಕ್ಷ ರೈತರ ದಾಖಲೆಗಳ ಇ&ಕೆವೈಸಿ ಸಾಧ್ಯವಾಗಿಲ್ಲ. ನಿರಂತರ ಜಾಗೃತಿ ಹಾಗೂ ಅರಿವು ಮೂಡಿಸುತ್ತಿದ್ದರೂ ರೈತರಿಂದ ನಿರೀಕ್ಷಿತ ಸ್ಪಂದನೆ ಲಭಿಸದಿರುವುದು ಕೃಷಿ ಅಧಿಕಾರಿಗಳ ನಿದ್ದೆಗೆಡಿಸಿದೆ.
ರಾಜ್ಯಾದ್ಯಂತ ರೈತ ಸ್ಪಂದನೆ ನೋಡಿದರೆ ಬೆಳಗಾವಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ಪಿಎಂ ಕಿಸಾನ್ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿರುವ 5.69 ಲಕ್ಷ ರೈತರ ಪೈಕಿ 3.10 ಲಕ್ಷ ರೈತರು ಹಾಗೂ ಮಂಡ್ಯ ಜಿಲ್ಲೆಯ 2.50 ಲಕ್ಷ ರೈತರ ಪೈಕಿ 1.40 ಲಕ್ಷ ರೈತರು ಇ&ಕೆವೈಸಿ ಜೋಡಣೆ ಮಾಡಿಸಿದ್ದು, ಜಿಲ್ಲೆಯ ಒಟ್ಟು ರೈತರ ಸಂಖ್ಯೆಗೆ ಅನುಗುಣವಾಗಿ ತಲಾ ಶೇ.55 ಗುರಿಸಾಧನೆ ಮಾಡುವ ಮೂಲಕ ಅಗ್ರಸ್ಥಾನದಲ್ಲಿವೆ.
ಬೆಂಗಳೂರು ನಗರ ಜಿಲ್ಲೆಯ 32,600 ರೈತರಲ್ಲಿ ಕೇವಲ 4008 ರೈತರ ಕೆವೈಸಿ ಜೋಡಿಸುವುದರ ಮೂಲಕ ಗುರಿ ಸಾಧನೆಯಲ್ಲಿ ಕೇವಲ ಶೇ.12 ಸಾಧಿಸಿ ಕೊನೆಯ ಸ್ಥಾನದಲ್ಲಿದೆ. ಇನ್ನು ರಾಜ್ಯದ ತಾಲೂಕುವಾರು ಸಾಧನೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೊದಲ ಸ್ಥಾನದಲ್ಲಿದ್ದು, 55,846 ರೈತರಲ್ಲಿ 36,822 ರೈತರ ದಾಖಲೆಗಳನ್ನು ಇ&ಕೆವೈಸಿ ಜೋಡಿಸುವುದರ ಮೂಲಕ ರಾಜ್ಯದಲ್ಲಿಯೇ ಅತಿಹೆಚ್ಚು (ಶೇ.65 ) ಗುರಿಸಾಧಿಸಿದೆ.
ಆ ನಂತರದ ಸ್ಥಾನದಲ್ಲಿ ಕ್ರಮವಾಗಿ ಬೈಲಹೊಂಗಲ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಹಾಗೂ ಉಡುಪಿಯ ಕುಂದಾಪುರ ತಾಲೂಕು ದ್ವೀತಿಯ (ಶೇ.61), ಹುಕ್ಕೇರಿ(ಶೇ.60) ತೃತೀಯ, ಚಿಕ್ಕೋಡಿ ಹಾಗೂ ತುಮಕೂರಿನ ಚಿಕ್ಕನಾಯಕನ ಹಳ್ಳಿ (ಶೇ.59) ಮತ್ತು ಖಾನಾಪುರ (ಶೇ.58) ತಾಲೂಕು ನಂತರದ ಹೆಚ್ಚಿನ ಗುರಿ ತಲುಪಿದ ತಾಲೂಕುಗಳಾಗಿದ್ದು, ಬೆಂಗಳೂರ ನಗರ ಜಿಲ್ಲೆಯ ತಾಲೂಕುಗಳು ಒಂದಂಕ್ಕಿಯನ್ನೂ ದಾಟದೆ ಕನಿಷ್ಠ ಗುರಿ ಸಾಧಿಸಿದ ತಾಲೂಕು ಎಂಬ ಹಣೆಪಟ್ಟಿ ಪಡೆದಿದ್ದು, ಹೆಚ್ಚಿನ ಸಾಧನೆಗೆ ಅವಕಾಶ ನೀಡಿ, ಸರ್ಕಾರ ಆಗಾಗ ಗಡುವು ವಿಸ್ತರಿಸುತ್ತಲೇ ಇದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆಯಲು ಇ&ಕೆವೈಸಿ ಪೂರ್ಣಗೊಳಿಸಲೇಬೇಕು. ಈ ಮೊದಲು 2022ರ ಮೇ 31ರ ಗಡುವು ನೀಡಲಾಗಿತ್ತು. ಬಳಿಕ ರೈತರ ಅನುಕೂಲಕ್ಕಾಗಿ ಜು.31ರ ವರೆಗೆ ವಿಸ್ತರಿಸಿತ್ತು. ಇದೀಗ ಮತ್ತೆ ಆ.15ರ ವರೆಗೆ ಇ&ಕೆವೈಸಿಗೆ ಕಾಲಾವಕಾಶ ನೀಡಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು.| ಶಿವನಗೌಡ ಪಾಟೀಲ ಜಂಟಿ ನಿರ್ದೇಶಕ, ಕೃಷಿ ಇಲಾಖೆ
| ರವಿ ಗೋಸಾವಿ