

ಕೊಪ್ಪಳ:ತಾಲೂಕಿನ ಬೇವಿನಳ್ಳಿ ಕಿರ್ಲೋಸ್ಕರ್ ಕಾರ್ಖಾನೆಯೂ ದೆಹಲಿಯ ಗ್ರೀನ್‌ಟೆಕ್ ಸಂಸ್ಥೆಯು ನೀಡುವ ಪ್ರತಿಷ್ಠಿತ ಗ್ರೀನ್‌ಟೆಕ್ ಮಾನವ ಸಂಪನ್ಮೂಲ ಪ್ರಶಸ್ತಿಗೆ ಭಾಜನವಾಗಿದೆ.
ಮಾನವ ಸಂಪನ್ಮೂಲ ಅಭ್ಯಾಸಗಳ ಬದ್ಧತೆ ಮಟ್ಟ ಕಾಪಾಡಿಕೊಳ್ಳುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ ಕಾರ್ಖಾನೆ/ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕಿರ್ಲೋಸ್ಕರ್ ಕಾರ್ಖಾನೆಯು ಕಲಿಕೆ ಮತ್ತು ಅಭಿವೃದ್ಧಿ ಹಾಗೂ ಉದ್ಯೋಗಿಗಳ ಕಾರ್ಯಮಗ್ನತೆ ವಿಭಾಗಗಳಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ ಪ್ರಶಸ್ತಿ ಲಭಿಸಿದೆ. ವ್ಯವಹಾರದಲ್ಲಿ ಉತ್ಕೃಷ್ಠತೆ, ಮಾನವ ಸಂಪನ್ಮೂಲ ಆಂತರಿಕ ಮೌಲ್ಯಗಳನ್ನು ಕಾಪಾಡುವಲ್ಲಿ ಸುಸ್ಥಿರತೆ, ನವೀನ ಮಾನವ ಸಂಪನ್ಮೂಲ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವುದು, ಮಾನವ ಸಂಪನ್ಮೂಲ ಕಾರ್ಯಚರಣೆಯ ಮಾನದಂಡಗಳ ಸುಧಾರಣೆಗಾಗಿ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿರುವ ಸಾಧನೆಗೆ ಸಂದ ಗೌರವವಾಗಿದೆ.
ಆ.21ರಂದು ದೆಹಲಿಯ ಹೋಟೆಲ್ ರ‌್ಯಾಡಿಸನ್ ಬ್ಲೂನಲ್ಲಿ ನಡೆದ ಒಂದು ದಿನದ ಶೃಂಗಸಭೆಯಲ್ಲಿ ಪ್ರಶಸ್ತಿ ನೀಡಲಾಗಿದೆ. ಕಿರ್ಲೋಸ್ಕರ್ ಕಾರ್ಖಾನೆ ಮಾನವ ಸಂಪನ್ಮೂಲ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯ್ಯಕ್ಷ ಪಿ. ನಾರಾಯಣ ಹಾಗೂ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಬಿ. ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಅಸ್ಸಾಂ ರಾಜ್ಯದ ಮಾಜಿ ರಾಜ್ಯಪಾಲ ಡಾ.ಜಗದೀಶ್ ಮುಕ್ಹಿ ಮತ್ತು ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್‌ನ ಅಧ್ಯಕ್ಷ ಕಮಲೇಶ್ವರ್ ಶರಣ್ ಪ್ರಶಸ್ತಿ ಪ್ರಧಾನ ಮಾಡಿದರು. ಲೋಕಸಭೆ ಮಾಜಿ ಸದಸ್ಯ ಮಹಾಬಲ್ ಮಿಶ್ರಾ ಅತಿಥಿಯಾಗಿ ಭಾಗಿಯಾಗಿದ್ದರು.
ಮಾನವ ಸಂಪನ್ಮೂಲ ವಿಭಾಗದ ವೃತ್ತಿಪರರು, ನಿಯಂತ್ರಕ ಪ್ರಾಧಿಕಾರಗಳ ತಜ್ಞರು, ಸಲಹೆಗಾರರು ಸೇರಿ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.