ಕಿರುಗೂರು ಗ್ರಾಪಂಗೆ ರಾಕೇಶ್ ಅಧ್ಯಕ್ಷ, ಸುನೀತಾ ಉಪಾಧ್ಯಕ್ಷೆ

08 gkp 01 (1)
ಕಿರಗೂರು ಪಂಚಾಯಿತಿ ಅಧ್ಯಕ್ಷರಾಗಿ ಸಿ.ಡಿ.ರಾಕೇಶ್, ಉಪಾಧ್ಯಕ್ಷರಾಗಿ ಬಿ.ಎಂ.ಸುನೀತಾ ಆಯ್ಕೆಯಾದರು. ಪಿ.ಡಿ.ಜೀವನ್, ಕೆ.ಕೆ.ಲಲಿತಾ, ಸಿ.ಪಿ.ರೇಖಾಪೆಮ್ಮಯ್ಯ, ಎಚ್.ವಿ.ರಂಗಸ್ವಾಮಿ, ಪಿ.ಡಿ ಸುಮಿತ್ರಾ, ಎಚ್.ಎಂ. ಕಾವೇರಮ್ಮ, ಕೆ.ಕೆ.ರವಿ, ಕೆ.ಎಂ.ಕಾವೇರಪ್ಪ, ಇದ್ದರು.
Published on

ಗೋಣಿಕೊಪ್ಪ: ಕಿರುಗೂರು ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಚೆಪ್ಪುಡೀರ ರಾಕೇಶ್ ಚುನಾಯಿತರಾದರೆ, ಉಪಾಧ್ಯಕ್ಷೆಯಾಗಿ ಬಿ.ಎಂ.ಸುನೀತಾ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸಿ.ಡಿ.ರಾಕೇಶ್ ಹಾಗೂ ಪಿ.ಡಿ.ಸುಮಿತ್ರಾ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ಕೂಡ ಬಿಜೆಪಿ ಬೆಂಬಲಿತರಾಗಿದ್ದು, ಅಧ್ಯಕ್ಷ ಗಾದಿಗೆ ಪೈಪೋಟಿ ಎದುರಾಗಿತ್ತು. ಪಕ್ಷದ ವರಿಷ್ಠರು ಅಂತಿಮ ಕ್ಷಣದಲ್ಲಿ ಸಿ.ಡಿ.ರಾಕೇಶ್ ಅವರನ್ನು ಅಧ್ಯಕ್ಷಗಿರಿಗೆ ಅಂತಿಮಗೊಳಿಸಿದರು.

ಈ ನಡುವೆ ಕಣದಿಂದ ಹಿಂದೆ ಸರಿಯುವಂತೆ ಪಿ.ಡಿ.ಸುಮಿತ್ರಾ ಅವರನ್ನು ಪಕ್ಷದ ನಾಯಕರು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಪಟ್ಟು ಹಿಡಿದ ಸುಮಿತ್ರಾ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ರಾಕೇಶ್ 7 ಮತ ಪಡೆದರೆ, ಸುಮಿತ್ರಾ 3 ಮತ ಪಡೆದು ಸೋಲು ಅನುಭವಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಸುನೀತಾ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ.ಆರ್.ರಾಜೇಶ್ ಅವಿರೋಧವಾಗಿ ಆಯ್ಕೆ ಘೋಷಿಸಿದರು.

ಬಿಜೆಪಿಯಿಂದ ಇಬ್ಬರು ಬೆಂಬಲಿತರು ಅಧ್ಯಕ್ಷಗಿರಿಗೆ ಪೈಪೋಟಿಯಲ್ಲಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಕ್ಷದ ಕಾರ್ಯಕರ್ತರು ಪಂಚಾಯಿತಿಯ ಹೊರ ಭಾಗದಲ್ಲಿ ಜಮಾವಣೆಗೊಂಡಿದ್ದರು. ಅಧ್ಯಕ್ಷರಾಗಿ ಸಿ.ಡಿ.ರಾಕೇಶ್ ಆಯ್ಕೆ ಆಗುತ್ತಿದ್ದಂತೆಯೇ ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸದಸ್ಯರಾದ ಪಿ.ಡಿ.ಜೀವನ್, ಕೆ.ಕೆ.ಲಲಿತಾ, ಸಿ.ಪಿ.ರೇಖಾ ಪೆಮ್ಮಯ್ಯ, ಎಚ್.ವಿ.ರಂಗಸ್ವಾಮಿ, ಪಿ.ಡಿ ಸುಮಿತ್ರಾ, ಎಚ್.ಎಂ. ಕಾವೇರಮ್ಮ, ಕೆ.ಕೆ.ರವಿ, ಕೆ.ಎಂ.ಕಾವೇರಪ್ಪ, ಬಿಜೆಪಿ ಕೃಷಿ ಮೋರ್ಚದ ತಾಲೂಕು ಅಧ್ಯಕ್ಷೆ, ಶಕ್ತಿ ಕೇಂದ್ರ ಪ್ರಭಾರ ಮಲ್ಚೀರ ಕವಿತ ಬೋಜಪ್ಪ, ಬೂತ್ ಅಧ್ಯಕ್ಷ ಚಿರಿಯಪಂಡ ಕೀರ್ತನ್ ಇತರರು ಹಾಜರಿದ್ದರು.

ಒಗ್ಗಟ್ಟಿನಿಂದ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜನರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ಸಿ.ಡಿ.ರಾಕೇಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net