

ಧಾರವಾಡ: ನಗರದ ಡಿಮ್ಹಾನ್ಸ್ನ ಕೋವಿಡ್-19 ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ವಿಜ್ಞಾನಿಗೆ ಕಿರುಕುಳ ನೀಡಿರುವ ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತನಿಖೆ ನಡೆಸುತ್ತಿದೆ. ಈ ಕುರಿತು ಶುಕ್ರವಾರ ವರದಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಿನಿಯೋಜನೆ ಮೇಲೆ ಡಿಮ್ಹಾನ್ಸ್ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅನ್ವಯಿಕ ತಳಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರ ವಿರುದ್ಧ ನೊಂದ ಮಹಿಳಾ ವಿಜ್ಞಾನಿ ಆರಂಭದಲ್ಲಿ ಡಿಮ್ಹಾನ್ಸ್ ಮುಖ್ಯಸ್ಥರಿಗೆ ದೂರು ನೀಡಿದ್ದರು. ನಂತರ ಜಿಲ್ಲಾಧಿಕಾರಿ, ಕವಿವಿ ಕುಲಪತಿ, ಮಹಿಳಾ ಆಯೋಗ ಹಾಗೂ ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಂತರಿಕ ದೂರು ನಿರ್ವಹಣಾ ಸಮಿತಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ಪ್ರಕರಣ ಕುರಿತು ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.