

ಬಳ್ಳಾರಿ : ಪ್ರಸ್ತುತದಲ್ಲಿ ಕಿರಿಯರು ಹಿರಿಯರಿಗೆ ಗೌರವಕೊಡಲಾಗದ ಸ್ಥಿತಿ ನಿರ್ಮಾಣವಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಹಾಗಾಗಿ ಕಿರಿಯರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎನ್. ಹೊಸಮನೆ ಹೇಳಿದರು.
ನಗರದ ಶಾಂತಿಧಾಮ ಆವರಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಡೆದ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು, ಈ ಹಿಂದೆ ಕಿರಿಯರು ಹಿರಿಯರ ಮಾತುಗಳಿಗೆ ಗೌರವಕೊಡುತ್ತಿದ್ದರು. ಆದರೆ ಈಗ ಆ ಮೌಲ್ಯಗಳು ಕಾಣುತ್ತಿಲ್ಲ. ಹಿರಿಯ ನಾಗರಿಕರ ಅನುಭವದ ವಿಚಾರಧಾರೆಗಳೇ ಕಿರಿಯರಿಗೆ ದಾರಿ ದೀಪವಾಗಬೇಕು ಎಂದು ತಿಳಿಸಿದರು. ಹಿರಿಯ ನಾಗರಿಕರ ಸಮಸ್ಯೆ-ಸಂಕಷ್ಟಗಳು ಏನೇ ಇದ್ದರೂ ಸಂಬಂಧಿಸಿದ ಅಧಿಕಾರಿಗಳನ್ನು ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರವನ್ನು ಹಾಗೂ ಜಿಲ್ಲಾ ನ್ಯಾಯಾಧೀಶರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಎಂ. ರಾಮಕೃಷ್ಣ ನಾಯಕ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್. ಗೋವಿಂದಪ್ಪ ಮಾತನಾಡಿದರು. ಬಳಿಕ ಹಿರಿಯ ನಾಗರಿಕರಿಗೆ ಪುರುಷ ಮತ್ತು ಮಹಿಳೆಯರಿಗೆ ಕ್ರೀಡಾ ಸ್ಫರ್ಧೆಗಳಾದ ನಡಿಗೆ, ಮ್ಯೂಸಿಕಲ್ ಚೇರ್ ಸ್ಪರ್ಧೆ ಹಾಗೂ ಬಕೆಟ್‌ನಲ್ಲಿ ರಿಂಗ್ ಎಸೆಯುವುದು ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳಾದ ಗಾಯನ ಮತ್ತು ಏಕಪಾತ್ರಭಿನಯ ಸ್ಫರ್ಧೆಗಳು ನಡೆದವು